ಸಾರಾಂಶ
ಹನ್ನೆರಡನೆಯ ಶತಮಾನದಲ್ಲಿದ್ದ ಶೋಷಿತ ಕಾಯಕ ಸಮಾಜಗಳಿಗೆ ಸಮಾನತೆಯನ್ನು ತಂದು ಕೊಡಲು ಬಸವೇಶ್ವರರು ಶೋಷಿತ ಸಮುದಾಯಗಳನ್ನು ಸಂಘಟಿಸಿ ಲಿಂಗಾಯತ ಧರ್ಮಕ್ಕೆ ಪರಿವರ್ತಿಸಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದರು.
ಕಾಯಕ ದಿನ ಆಚರಣೆ
ಚನ್ನಗಿರಿ: ಹನ್ನೆರಡನೆಯ ಶತಮಾನದಲ್ಲಿದ್ದ ಶೋಷಿತ ಕಾಯಕ ಸಮಾಜಗಳಿಗೆ ಸಮಾನತೆಯನ್ನು ತಂದು ಕೊಡಲು ಬಸವೇಶ್ವರರು ಶೋಷಿತ ಸಮುದಾಯಗಳನ್ನು ಸಂಘಟಿಸಿ ಲಿಂಗಾಯತ ಧರ್ಮಕ್ಕೆ ಪರಿವರ್ತಿಸಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದರು. ಅವರ ಮಾರ್ಗದರ್ಶನದಂತೆ ಇಂದಿನ ಯುವ ಸಮೂಹ ನಡೆದಾಗ ಸಮ ಸಮಾಜ ನಿರ್ಮಾಣವಾಗಲಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್‌ನ ಗೌರವ ಅಧ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನಪ್ಪ ಹೇಳಿದರು.ನಗರದಲ್ಲಿ ಗುರುವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕಾಯಕ ದಿನ ಕಾರ್ಯಕ್ರಮದಲ್ಲಿ ಕಾಯಕ ಸಮಾಜದ ಬಂಧುಗಳಿಗೆ ಸನ್ಮಾನಿಸಿ ಮಾತನಾಡಿ, ಮಡಿವಾಳ ಮಾಚಯ್ಯ, ಮಾದರ ಚನ್ನಯ್ಯ, ಡೊಹಾರ ಕಕ್ಕಯ್ಯ, ನುಲಿಯ ಚಂದಯ್ಯ, ಸಮಗಾರ ಹರಳಯ್ಯ ಸೇರಿದಂತೆ ಇನ್ನು ಅನೇಕ ತುಳಿತಕ್ಕೆ ಒಳಗಾಗಿದ್ದ ಸಮಾಜಗಳಿಗೆ ಸಮಾನತೆಯನ್ನು ಕೊಟ್ಟವರು ಬಸವೇಶ್ವರರಾಗಿದ್ದು ಅದ್ದಕ್ಕಾಗಿ ಬಸವೇಶ್ವರರಿಗೆ ವಿಶ್ವಗುರು ಎಂಬ ಬಿರುದನ್ನು ನೀಡಲಾಗಿದೆ ಎಂದರು.
ತಾಲೂಕು ಶಸಾಪ ಅಧ್ಯಕ್ಷ ಎಂ.ಎಸ್.ಮಲ್ಲೇಶಪ್ಪ ಮಾತನಾಡಿ, ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿವರ್ಷ ಮೇ 1ನೇ ತಾರೀಖಿನಂದು ಕಾಯಕ ದಿನ ಆಚರಣೆ ಮಾಡಿಕೊಂಡು ಬರುತ್ತಿದ್ದು ಪ್ರತಿವರ್ಷ ಸಹ ಕಾಯಕವನ್ನು ಮಾಡುವಂತವರನ್ನು ಗುರುತಿಸಿ ಅವರನ್ನು ಗೌರವಿಸುತ್ತಿದ್ದು ಈ ವರ್ಷವು ಪಾದರಕ್ಷೆಗಳನ್ನು ತಯಾರು ಮಾಡುವ ಚಿನ್ನರಾಜ್, ಎಂ.ಬಿ.ಅಣ್ಣಯ್ಯ, ಮಡಿವಾಳ ಸಮಾಜದ ಕೆ.ಹನುಮಂತ್ ರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.ಸಮಾಜದಲ್ಲಿ ಅಸಮಾನತೆ ತೊಡೆದು ಹಾಕಲು ಸರ್ವರಿಗೂ ಸಮಪಾಲು, ಸಮ ಬಾಳು ಎಂಬ ತತ್ವವನ್ನು ಸಾರಿದ ಜಗಜ್ಯೋತಿ ಬಸವೇಶ್ವರರ ಮಾರ್ಗದರ್ಶನ ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ ಎಂದರು.
ಪರಿಷತ್ತಿನ ಪ್ರಮುಖರಾದ ಎನ್.ಎಸ್.ರಾಜಪ್ಪ, ಟಿ.ವಿ.ಶಿವಲಿಂಗಪ್ಪ, ಜವಳಿ ಮಹೇಶ್, ಬಿ.ಶಿವಲಿಂಗಪ್ಪ ಹಾಜರಿದ್ದರು.