ನಾವು ಕೇಳಿಲ್ಲ ಅಂದ್ರೆ ಸ್ವತಃ ಏನೂ ಮಾಡಲ್ಲವೇ? : ಸಿಇಒ ಈಶ್ವರ್‌ ಕಾಂದೂ

| Published : Sep 04 2025, 01:00 AM IST

ನಾವು ಕೇಳಿಲ್ಲ ಅಂದ್ರೆ ಸ್ವತಃ ಏನೂ ಮಾಡಲ್ಲವೇ? : ಸಿಇಒ ಈಶ್ವರ್‌ ಕಾಂದೂ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಕೇಳಿಲ್ಲ ಅಂದರೇ ಸ್ವಂತವಾಗಿ ಏನೂ ಮಾಡಲ್ಲವೇ? ಹಿಂದಿನ ಸಭೆಯಲ್ಲಿ ಸೂಚಿಸಿದ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿಲ್ಲ ಮುಂದಿನ ದಿನಗಳಲ್ಲಿ ಈ ರೀತಿಯ ವರ್ತನೆ ಸಹಿಸುವುದಿಲ್ಲ, ನಿಗದಿತ ಗುರಿಯನ್ನು ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ನಾವು ಕೇಳಿಲ್ಲ ಅಂದರೇ ಸ್ವಂತವಾಗಿ ಏನೂ ಮಾಡಲ್ಲವೇ? ಹಿಂದಿನ ಸಭೆಯಲ್ಲಿ ಸೂಚಿಸಿದ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿಲ್ಲ ಮುಂದಿನ ದಿನಗಳಲ್ಲಿ ಈ ರೀತಿಯ ವರ್ತನೆ ಸಹಿಸುವುದಿಲ್ಲ, ನಿಗದಿತ ಗುರಿಯನ್ನು ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಎಚ್ಚರಿಕೆ ನೀಡಿದರು.

ಸ್ಥಳೀಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ, ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಎಲ್ಲ ಗ್ರಾಪಂಗಳಲ್ಲಿ ಬಾಕಿ ಇರುವ ತೆರಿಗೆ ವಸೂಲಿ ವಿಚಾರದಲ್ಲಿ ಒಬ್ಬೇ ಒಬ್ಬ ಪಿಡಿಒ ಸಹ ಅಭಿನಂದನೀಯವಾದ ಕೆಲಸ ಮಾಡಿಲ್ಲ. ತೆರಿಗೆ ವಸೂಲಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಸಲ್ಲಿಸಬೇಕಾದ ದಾಖಲಾತಿಗಳ ಕುರಿತು ಪಿಡಿಒಗಳಿಗೆ ಮಾಹಿತಿಯಿಲ್ಲ. ಈ ಕುರಿತು ಅಧ್ಯಯನ ಮಾಡಿ ಬಾಕಿ ಇರುವ ತೆರಿಗೆ ವಸೂಲಿಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಸೂಚಿಸಿದರು.

ಈ ವಿಚಾರವಾಗಿ ವಿಳಂಬ ಧೋರಣೆ, ವರ್ಗಾವಣೆ ಆಗುತ್ತೇವೆ, ಬಂದವರು ನೋಡಿಕೊಳ್ಳುತ್ತಾರೆ ಎನ್ನುವ ಮನೋಭಾವನೆಯಿಂದ ಹೊರಬರಬೇಕು. ನಿಗದಿತ ಸಮಯದಲ್ಲಿಯೇ ಕೆಲಸಗಳನ್ನು ಮುಗಿಸ ಬೇಕು. ಈ ಸಂಗತಿಯಲ್ಲಿ ಆಯಾ ತಾಲೂಕಿನ ಇಒಗಳ ಮಾರ್ಗದರ್ಶನ ಮಾಡಬೇಕು, ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಪ್ರಗತಿಯ ಪರಿಶೀಲನೆ ಕೈಗೊಳ್ಳಬೇಕು ಎಂದರು.

ಪ್ರಗತಿ ಕ್ಷೀಣ ಎಡಿಗಳಿಗೆ ಶೋಕಾಸ್: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಬೇಕಾಗಿದ್ದು, ಆ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಸರಿಯಾಗಿ ಕೆಲಸಮಾಡಬೇಕು. ರಾಯಚೂರು, ಮಾನ್ವಿ ಮತ್ತು ದೇವದುರ್ಗ ತಾಪಂನಲ್ಲಿ ಪ್ರಗತಿ ಕ್ಷೀಣವಾಗಿದ್ದು ಇದು ಎಡಿಗಳು ಯಾವುದೇ ರೀತಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ತೋರಿಸುತ್ತಿದೆ ಕೂಡಲೇ ಅವರಿಗೆ ಶೋಕಾಸ್ ನೋಟಿಸ್‌ ಜಾರಿಗೊಳಿಸುವಂತೆ ನಿರ್ದೇಶಿಸಿದರು.

ನರೇಗಾ ಯೋಜನೆಯಡಿ ಕೃಷಿ, ತೋಟಗಾರಿ, ರೇಷ್ಮೆ, ಅರಣ್ಯ ಹಾಗೂ ಪಿಆರ್‌ಇಡಿ ಸೇರಿ ಇತರೆ ಇಲಾಖೆಗಳಿಗೆ ವಹಿಸುವ ಕೆಲಸ-ಕಾಮಗಾರಿಗಳು ಪ್ರಗತಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ. ಜಿಲ್ಲೆಯಲ್ಲಿರುವ ನಾಲ್ಕು ನರ್ಸರಿಯಲ್ಲಿ ಕೇವಲ 299 ಮಾತ್ರ ಮರಗಳಿದ್ದು ಇದು ಬಹಳಾ ಕಡಿಮೆಯಾಗಿದೆ. ಅರಣ್ಯ ಪ್ರದೇಶ ವಿಚಾರದಲ್ಲಿ ರಾಯಚೂರು, ಮಾನ್ವಿ, ಮಸ್ಕಿ ಮತ್ತು ಸಿಂಧನೂರಿನಲ್ಲಿ ಇನ್ನಷ್ಟು ಹೆಚ್ಚೇ ಕಾರ್ಯ ಗಳನ್ನು ಮಾಡಬೇಕಾಗಿದೆ. ಕ್ರಿಯಾ ಯೋಜನೆ ರೂಪಿಸುವಾಗ ಅವುಗಳನ್ನು ಸೇರಿಸಿ ಪ್ರಗತಿ ಸಾಧಿಸುವುದರ ಕಡೆಗೆ ಹೆಚ್ಚಾಗಿ ಗಮನ ಹರಿಸಬೇಕು. ಕೃಷಿ ಇಲಾಖೆಯಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಯಾಗಿಲ್ಲ ಅದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಕಠಿಣ ಕ್ರಮ ಜರುಗಿಸಿ: ಲಿಂಗಸುಗೂರು ತಾಲೂಕಿನ ಕೃಷಿ ಇಲಾಖೆಯ ಎಡಿ, ಎಇ ಅವರು ನರೇಗಾ ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ ಅವರಿಗೆ ಗುರಿ ನೀಡಿಲ್ಲ. ಕೂಡಲೇ ಇಲಾಖೆ ಸಂಬಂಧಿತ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಇಲಾಖೆ ಡಿಡಿ ಜಯಪ್ರಕಾಶ ಅವರಿಗೆ ಸಿಇಒ ಸೂಚಿಸಿದರು. ಕ್ರಮದ ಆಧಾರದ ಮೇಲೆ ಹೊಸದಾಗಿ ಗುರಿ ಕಲ್ಪಿಸಲು ಮನವಿ ಸಲ್ಲಿಸುವಂತೆ ತಿಳಿಸಿದರು.

ಬ್ಲಾಕ್‌ ಲಿಸ್ಟ್‌ ಮಾಡಿ: ಪಿಆರ್‌ಇಡಿಗೆ ವಹಿಸಿದ ಕೆಲಸಗಳಲ್ಲಿ ಸಾಕಷ್ಟು ಬಾಕಿ ಉಳಿದಿವೆ. ಸುಧಾರಿಸುವಂತೆ ಹಿಂದಿನ ಸಭೆಯಲ್ಲಿ ತಿಳಿಸಿದ್ದರು ಪ್ರಗತಿಯಾಗಿಲ್ಲ. ಹಲವಾರು ಗ್ರಾಪಂಗಳಲ್ಲಿ ಬಾಕಿ ಉಳಿಸಿ ಕೊಂಡಿರುವ ವೆಂಡರ್‌ಗಳಿಗೆ ನಿಯಮಾನುಸಾರ ನೋಟಿಸ್‌ ಜಾರಿಗೊಳಿಸಿ, ಬ್ಲಾಕ್‌ ಲಿಸ್ಟ್‌ಗೆ ಸೇರಿಸುವಂತೆ ಆದೇಶಿಸಿದರು.

ನಿಗದಿತ ಗುರಿಯ ಕೆಲಸಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು. ಹಿಂದಿನ ವರ್ಷದ ಬಾಕಿ ಕಾಮಗಾರಿಗಳಿಗೆ ವೇಗ ನೀಡಬೇಕು, ಯಾವುದೇ ಸಮಸ್ಯೆ ಕಂಡುಬಂದಲ್ಲಿ ಪರಸ್ಪರ ಸಹಕಾರದೊಂದಿಗೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾಧಿಕಾರಿ ಟಿ.ರೋಣಿ, ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ,ಮುಖ್ಯಲೆಕ್ಕಾಧಿಕಾರಿ ವಿಜಯಶಂಕರ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಪಂ ಇಒ, ಪಿಡಿಒ ಹಾಗೂ ಇತರೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.