ಸಾರಾಂಶ
ಈ ಹಿಂದೆ ನ್ಯಾಯಾಲಯದ ತೀರ್ಪು ವಿಳಂಬವಾಗಿ ವರ್ಷಗಟ್ಟಳೆ ಕಾಯಬೇಕು ಎಂಬ ಭಾವನೆ ಜನ ಸಾಮಾನ್ಯರಲ್ಲಿತ್ತು. ಆದರೆ, ಈಗ ಕಾನೂನಿಗೆ ಹಲವು ಬದಲಾವಣೆ ತಂದಿದ್ದು ಒಂದೊಂದು ಕೇಸನ್ನು ಇಷ್ಟು ಕಾಲ ಮಿತಿಯೊಳಗೆ ತೀರ್ಪು ನೀಡುವ ನಿಯಮ ಬಂದಿದೆ ಎಂದು ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ನ್ಯಾ.ದಾಸರಿ ಕ್ರಾಂತಿ ಕಿರಣ್ ತಿಳಿಸಿದರು.
ಅಂಬೇಡ್ಕರ್ ಭವನದಲ್ಲಿ ವಿಶ್ವ ಜನ ಸಂಖ್ಯಾ ದಿನಾಚರಣೆ- ಕಾನೂನು ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಹಂರಾಜಪುರನಮ್ಮ ದೇಶದ ಸಂವಿಧಾನದಲ್ಲಿ ನಮಗೆ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ಆದರೆ, ನಮಗೆ ಹಕ್ಕುಗಳು ಬೇಕಾದರೆ ನಾವು ನಮ್ಮ ಕರ್ತವ್ಯವನ್ನು ಸಹ ಸರಿಯಾಗಿ ನಿಬಾಯಿಸಬೇಕು ಎಂದು ಸಿವಿಲ್ ನ್ಯಾಯಧೀಶ ದಾಸರಿ ಕ್ರಾಂತಿ ಕಿರಣ್ ಸಲಹೆ ನೀಡಿದರು.
ಬುಧವಾರ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ, ಕಾನೂನು ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ, ಕಾನೂನು ಸಾಕ್ಷರತಾ ಕಾರ್ಯಕ್ರಮ, ಮಾನವ ಹಕ್ಕುಗಳ ದಿನ ಹಾಗೂ ವಿಕಲ ಚೇತನರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಹಿಂದಿನ ವರ್ಷಗಳಲ್ಲಿ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ತೀರ್ಪು ಬರಲು ವಿಳಂಬವಾಗಿ ವರ್ಷಗಟ್ಟಳೆ ಕಾಯಬೇಕು ಎಂಬ ಭಾವನೆ ಜನ ಸಾಮಾನ್ಯರಲ್ಲಿತ್ತು. ಆದರೆ, ಈಗ ಕಾನೂನಿಗೆ ಹಲವು ಬದಲಾವಣೆ ತಂದಿದ್ದು ಒಂದೊಂದು ಕೇಸುಗಳಿಗೆ ಇಷ್ಟು ಕಾಲ ಮಿತಿಯೊಳಗೆ ತೀರ್ಪು ನೀಡಬೇಕು ಎಂಬ ನಿಯಮ ಬಂದಿದೆ. ಕಾನೂನು ಸೇವಾ ಸಮಿತಿ ಮೂಲಕ ಬಡವರಿಗೆ ಉಚಿತವಾಗಿ ವಕೀಲರನ್ನು ನೇಮಿಸಿ ಕೊಡುತ್ತೇವೆ. ಮಹಿಳಾ ಸಬಲೀಕರಣ ಆಗಬೇಕಾದರೆ ಪ್ರತಿಯೊಬ್ಬ ಮಹಿಳೆ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು. ವಕೀಲ ಪೌಲ್ ಚೆರಿಯನ್ ಮಾನವ ಹಕ್ಕುಗಳ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿ, 1993 ರಲ್ಲಿ ಭಾರತ ದೇಶ ಮಾನವ ಹಕ್ಕುಗಳ ಕಾಯ್ದೆ ತಂದು ಮಾನವ ಹಕ್ಕುಗಳ ಆಯೋಗ ರಚನೆ ಮಾಡಿದೆ. 2005 ರಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ನೇಮಿಸಿತು. ನಾಗರಿಕರ ಸ್ವಾತಂತ್ರ್ಯಕ್ಕೆ ಧಕ್ಕೆ, ಅವರ ಘನತೆಗೆ ಚ್ಯುತಿ ಬಂದರೆ, ಅವರ ಮೇಲೆ ದೌರ್ಜನ್ಯವಾದರೆ ಅಂಥಹ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗ ತನಿಖೆ ಮಾಡಲಿದೆ. ನಿವೃತ್ತ ನ್ಯಾಯಾಧೀಶ ರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಮಾನವ ಹಕ್ಕುಗಳ ಆಯೋಗದ ಆದೇಶ ಸಿವಿಲ್ ನ್ಯಾಯಾಲಯದ ಆದೇಶದಂತೆ ಪರಿಗಣಿಸಲಾಗುತ್ತದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ರುಖಿಯತ್ ಜನ ಸಂಖ್ಯಾ ಸ್ಪೋಟದ ಬಗ್ಗೆ ಉಪನ್ಯಾಸ ನೀಡಿ, ಜನ ಸಂಖ್ಯೆ ಏರಿಕೆ ಸಮಸ್ಯೆಯೂ ಆಗಿದೆ. ವರವೂ ಆಗಿದೆ. ಶೇ. 70 ರಷ್ಟು ಸಮಸ್ಯೆಯೇ ಆಗಿದೆ. 2022ರ ಗಣತಿಯಂತೆ ಭಾರತದ ಜನಸಂಖ್ಯೆ 142 ಕೋಟಿ ಆಗಿದೆ. ಪ್ರಪಂಚದಲ್ಲಿ ಚೀನಾ ದೇಶ ಬಿಟ್ಟರೆ ಭಾರತದ ಜನ ಸಂಖ್ಯೆ 2 ನೇ ಸ್ಥಾನದಲ್ಲಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಯುವ ಜನರು ಇರುವ ದೇಶ ಭಾರತ ದೇಶವಾಗಿದೆ. ಭಾರತದಲ್ಲಿ ಶೇ 60 ರಷ್ಟು ಯವ ಜನರಿದ್ದಾರೆ. ಸದೃಡ ಯುವ ಜನರಿಂದ ಬಲಿಷ್ಠ ಭಾರತ ದೇಶ ಕಟ್ಟಲು ಸಾಧ್ಯ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದ್ದರು ಎಂದರು. ಸಭೆ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ತಹಸೀಲ್ದಾರ್ ತನುಜ ಸವದತ್ತಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಜುಬೇದ, ಸೋಜ, ಮುಕಂದ, ಮುನಾವರ್ ಪಾಷಾ, ಸುರೈಯಾ ಭಾನು, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ. ಲಲಿತ , ಪವನ್ ಕರ್ , ಪಿ.ಪಿ.ಬೇಬಿ ಇದ್ದರು.