ಜವಾಬ್ದಾರಿ ಅರಿತು ಕೆಲಸ ಮಾಡಿದರೆ ದೇಶಾಭಿವೃದ್ಧಿ: ಮುರುಡಿ

| Published : Jan 27 2025, 12:45 AM IST

ಸಾರಾಂಶ

೨೦೨೫ರ ಗಣರಾಜ್ಯೋತ್ಸವ ಆಚರಣೆಯು ಸುವರ್ಣ ಭಾರತ, ಪರಂಪರೆ ಮತ್ತು ಪ್ರಗತಿ ಎನ್ನುವ ವಿಷಯದ ಮೇಲೆ ಕೇಂದ್ರಿಕೃತವಾಗಿದೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ಪ್ರತಿಯೊಬ್ಬರು ಜವಾಬ್ದಾರಿ ಅರಿತು ಕೆಲಸ ಮಾಡಿದರೆ ದೇಶಾಭಿವೃದ್ಧಿಯಾಗಲಿದ್ದು, ಈ ನಿಟ್ಟಿನಲ್ಲಿ ಸಾಂಘಿಕವಾಗಿ ಪ್ರಯತ್ನಿಸಬೇಕು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.

ಪಟ್ಟಣದ ಕೆಪಿಎಸ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವ ಸಾರ್ವಜನಿಕ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

೨೦೨೫ರ ಗಣರಾಜ್ಯೋತ್ಸವ ಆಚರಣೆಯು ಸುವರ್ಣ ಭಾರತ, ಪರಂಪರೆ ಮತ್ತು ಪ್ರಗತಿ ಎನ್ನುವ ವಿಷಯದ ಮೇಲೆ ಕೇಂದ್ರಿಕೃತವಾಗಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡಿಕೊಂಡು ಜನಮಾನಸದಲ್ಲಿ ಉಳಿಸುವ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರಸ್ತುತ ವರ್ಷದಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಅಭಿವೃದ್ಧಿಯ ಪ್ರಯಾಣವನ್ನು ಎತ್ತಿ ಹಿಡಿಯುವ ಕೆಲಸ ಮಾಡಲಾಗುತ್ತಿದೆ.

ದೇಶದ ಅನೇಕ ರಾಜ್ಯಗಳ ಪೈಕಿ ಕರ್ನಾಟಕದಿಂದ ಲಕ್ಕುಂಡಿ ದೇಗುಲದ ಶಿಲ್ಪಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋ ಕರ್ತವ್ಯ ಪಥದಲ್ಲಿ ಗಮನ ಸೆಳೆದಿರುವುದು ಹೆಮ್ಮೆಯ ವಿಷಯ ಎಂದರು.

ಇನ್ನೂ ದೇಶದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರು, ಅನ್ನದಾತರು, ವಿಜ್ಞಾನಿಗಳಿಗೆ ಹಾಗೂ ಶ್ರಮಿಜೀವಿಗಳನ್ನು ಸ್ಮರಿಸುವ ಸುದಿನವಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ನಮ್ಮ ಸೇವೆ ಸಲ್ಲಿಸೋಣ ಎಂದು ತಿಳಿಸಿದರು.

ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಪಿಐ ಎಂ.ಡಿ. ಪೈಜುಲ್ಲಾ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ. ರಾಜಶೇಖರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿರೂಪಾಕ್ಷಿ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಸೇರಿದಂತೆ ಪಪಂ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಶಿಷ್ಟಾಚಾರ ಉಲ್ಲಂಘನೆ:

ಇತ್ತೀಚೆಗೆ ಪಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ೧ನೇ ವಾರ್ಡಿನ ಹುಸೇನಬೀ ಚಳ್ಳಮರದ ಸಂಬಂಧಿಕರೊಬ್ಬರು ಶಿಷ್ಟಾಚಾರ ಉಲ್ಲಂಘಿಸಿ ಗಣರಾಜ್ಯೋತ್ಸವದ ವೇದಿಕೆ ಹಂಚಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಜತೆಗೆ ಪಪಂ ಎಲ್ಲಾ ಸದಸ್ಯರು ಸರದಿಯಲ್ಲಿ ಉಪಸ್ಥಿತರಾಗುತ್ತಿದ್ದಂತೆ ವೇದಿಕೆಯು ಜನಜಂಗುಳಿಯಿಂದ ತುಂಬಿಕೊಂಡಿತು. ಇದರಿಂದ ವೇದಿಕೆ ಮೇಲಿದ್ದ ಅತಿಥಿಗಳಿಗೆ ಮುಜುಗರ ಉಂಟಾಯಿತು.ಇತ್ತ ಪತ್ರಕರ್ತರಿಗೆ ಮೀಸಲಾಗಿದ್ದ ಖುರ್ಚಿಗಳಲ್ಲಿ ರಾಜಕರಣಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕುಳಿತುಕೊಂಡಿದ್ದರಿಂದ ವರದಿಗಾಗಿ ಬಂದಿದ್ದ ಪತ್ರಕರ್ತರು ನಿಂತುಕೊಂಡೆ ಇರಬೇಕಾಯಿತು. ಅಲ್ಲದೇ ಪಪಂ ಅಧ್ಯಕ್ಷರ ಸಂಬಂಧಿಕರು ವೇದಿಕೆ ಹಂಚಿಕೊಳ್ಳುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ ಪ್ರಕರಣ ಸಂಬಂಧಿಸಿದಂತೆ ತಹಸೀಲ್ದಾರರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆನ್ನುವ ಕೂಗು ಸ್ಥಳೀಯರಿಂದ ವ್ಯಕ್ತವಾಗಿದೆ.