ಗೋ ಸಂಪತ್ತು ಮುಗಿದರೆ ಒಕ್ಕಲುತನ ಅಂತ್ಯ

| Published : Jan 17 2025, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಗೋ ಸಂಪತ್ತು ಮುಗಿದರೆ ಒಕ್ಕಲುತನ ಮುಗಿಯುತ್ತದೆ ಎಂಬ ಕಳವಳಕಾರಿ ಸಂಗತಿ ರೈತರಿಗೆ ಅರ್ಥವಾಗುತ್ತಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಗೋ ಸಂಪತ್ತು ಮುಗಿದರೆ ಒಕ್ಕಲುತನ ಮುಗಿಯುತ್ತದೆ ಎಂಬ ಕಳವಳಕಾರಿ ಸಂಗತಿ ರೈತರಿಗೆ ಅರ್ಥವಾಗುತ್ತಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಿಕೋಟಾ ತಾಲೂಕಿನ ತೊರವಿ ಗ್ರಾಮದ ಹೊರವಲಯದಲ್ಲಿ ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಸಿದ್ದೇಶ್ವರ ಜಾನುವಾರ ಜಾತ್ರೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯಾಂತ್ರೀಕೃತ ಜಗತ್ತು, ದನಗಳ ನಿರ್ವಹಣೆ ಕಷ್ಟದಿಂದ ಒಳ್ಳೆಯ ಗೋವುಗಳು, ಎತ್ತುಗಳು ಕಟುಕರ ಪಾಲಾಗುತ್ತಿವೆ. ಈ ಹಿಂದೆ ಸಿದ್ದೇಶ್ವರ ಜಾನುವಾರ ಜಾತ್ರೆ ಬಹುದೊಡ್ಡ ಜಾತ್ರೆ ಆಗಿತ್ತು. ಮಹಾರಾಷ್ಟ್ರ, ಆಂಧ್ರ ರಾಜ್ಯಗಳಿಂದಲೂ ಖರೀದಿಗೆ ಬರುತ್ತಿದ್ದರು. 110 ಎಕರೆ ವಿಶಾಲ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಜಾನುವಾರುಗಳು ಕಾಣುತ್ತಿದ್ದವು. ಈಗಿನ ದನದ ಜಾತ್ರೆಯ ಪರಿಸ್ಥಿತಿ ನೊಡಿದರೆ ಮುಂದಿನ ಐದಾರು ವರ್ಷಗಳಲ್ಲಿ ದನದ ಜಾತ್ರೆಗಳೇ ದೇಶದಲ್ಲಿ ಬಂದಾಗುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಗೋ ಸಂಪತ್ತು ಉಳಿಸದಿದ್ದರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರ ಮನೆಗಳಲ್ಲಿ ಕನಿಷ್ಟ ಒಂದು ಗೋವನ್ನಾದರೂ ಸಾಕಬೇಕು. ನಮ್ಮಲ್ಲಿ ಒಳ್ಳೆಯ ಎತ್ತುಗಳಿವೆ ಕೃಷಿ ಚಟುವಟಿಕೆಗಳಿಗೆ ಬೇಕೆನ್ನುವರು ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಸಾಕು ಎನಿಸಿದಾಗ ಮತ್ತೆ ನಮಗೆ ಕೊಡಬೇಕು ಎಂಬ ಷರತ್ತು ಮಾತ್ರ ರೈತರಿಂದ ಪಡೆಯುತ್ತೇವೆ ಎಂದರು.

ಈ ವೇಳೆ ಅತ್ಯುತ್ತಮ ಜಾನುವಾರುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು, ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.