ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿ ನೌಕರರ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯದಲ್ಲಿರುವ ಯಾವುದಾದರು ಒಬ್ಬ ಸರ್ಕಾರಿ ನೌಕರ ಸಂಬಳ ಸಿಕ್ಕಿಲ್ಲ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸೆದರು.ನಗರದಲ್ಲಿ ಗುರುವಾರ ರಾತ್ರಿ ನಡೆದ ಪ್ರಜಾಧ್ವನಿ-2ರ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಪಪ್ರಚಾರ, ಶುದ್ಧ ಸುಳ್ಳನ್ನು ಹೇಳುವುದರಲ್ಲಿ ನಿಸ್ಸೀಮರಾಗಿರುವ ಪ್ರಧಾನಿಗಳಿಗೆ ರಾಜ್ಯದ ಖಜಾನೆ ವಿಷಯದಲ್ಲಿ ಏಕೆ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ದ್ವೇಷ ಭಾಷಣ, ಧರ್ಮದ ರಾಜಕಾರಣವನ್ನೇ ಬಂಡವಾಳ ಮಾಡಿಕೊಂಡು ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರೆ ಮೊದಲು ಸಂವಿಧಾನವನ್ನು ಒಮ್ಮೆ ಓದಿ. ಮೀಸಲಾತಿ ವಿಷಯದಲ್ಲಿ ಸಂವಿಧಾನ ಏನು ಹೇಳಿದೆ ಎಂಬುದನ್ನು ಆರ್ಟಿಕಲ್-15 ಮತ್ತು 16 ರನ್ನು ಒಮ್ಮೆ ಓದಿ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮೀಸಲಾತಿ ಕುರಿತು ಒಮ್ಮೆ ಪ್ರಧಾನಿಗಳು ಅರ್ಥಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.ಪ್ರಧಾನಿ ಕಂಬಳಿ ನಾಟಕ:
ಬಾಗಲಕೋಟೆ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಯವರಿಗೆ ಮಾಜಿ ಶಾಸಕ ಚರಂತಿಮಠ ಅವರು ಹಾಕಿದ ಕಂಬಳಿ ಮತ್ತು ನಂತರ ಪ್ರಧಾನಿ ಅವರ ನಾಟಕದ ಮಾತುಗಳು ನಿಜಕ್ಕೂ ಅರ್ಥವಿಲ್ಲದ್ದು. ಸಾಮಾಜಿಕ ನ್ಯಾಯದ ವಿರೋಧಿಯಾಗಿರುವ ಪ್ರಧಾನಿಗಳು ರಾಜ್ಯದ ಒಬ್ಬರೇ ಒಬ್ಬ ಕುರುಬರಿಗೆ, ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ಟಿಕೆಟ್ ನೀಡದೆ ವಂಚಿಸಿದ್ದು, ಜನರಿಗೆ ಅರ್ಥವಾಗಿದೆ ಎಂದರು.ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ:
ಎಲ್ಲ ರಂಗದಲ್ಲಿಯೂ ವೈಫಲ್ಯ ಕಂಡಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ಬಾರಿ ಸೋಲುವುದು ನಿಶ್ಚಿತ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಅಧಿಕಾರಕ್ಕೆ ಬರುತ್ತದೆ. ಹತ್ತು ವರ್ಷಗಳ ಕಾಲ ಧರ್ಮ ಮತ್ತು ಜಾತಿ ಆಧಾರದ ಮೇಲೆ ಸುಳ್ಳಿನ ಸರಮಾಲೆಯಲ್ಲಿ ಭ್ರಮೆ ಹುಟ್ಟಿಸಿದ ಈ ಸರ್ಕಾರಕ್ಕೆ ಸೋಲು ಖಚಿತ ಎಂದರು.ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಳಸಾ-ಬಂಡೂರಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಸೂಚನೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ತ್ವರಿತ ಚಾಲನೆ ನೀಡುವುದಾಗಿ ಭರವಸೆ ನೀಡಿದರು.----------
ಕೋಟ್......ಸದಾ ಸುಳ್ಳನ್ನೇ ಹೇಳುವ ಪ್ರಧಾನಿ ಮೋದಿ ಅವರಿಗೆ ವಾಸ್ತವಾಂಶದ ಕೊರತೆ ಇದೆ. ಹೀಗಾಗಿ ನೌಕರರಿಗೆ ಸಂಬಳ ನೀಡಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳುತ್ತಿದ್ದಾರೆ. ಇದು ನಿಜವಾದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ. ಗ್ಯಾರಂಟಿಗಳಿಗೆ ಎಂಟು ತಿಂಗಳಲ್ಲಿ ₹ 36 ಸಾವಿರ ಕೋಟಿ ಜನಸಾಮಾನ್ಯರ ಬದುಕಿಗೆ ನೆರವಾಗಲು ನೀಡಿದೆ. ಈ ವರ್ಷ ಸಹ ₹ 52 ಸಾವಿರ ಕೋಟಿಯಷ್ಟು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದೆ. ರಾಜ್ಯದ ಖಜಾನೆ ಸಮೃದ್ಧ ಇರುವುದರಿಂದಲೇ ಇದು ಸಾಧ್ಯವಾಗಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ