ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಿಳೆ ಸಬಲರಾದಾಗ ಮಾತ್ರ ಕುಟುಂಬ ಮತ್ತು ಸಮಾಜವೂ ಸಹ ಸಬಲವಾಗುತ್ತದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಸಹಭಾಗಿತ್ವ ಇಲಾಖೆಗಳ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಮಾನಸಿಕವಾಗಿ ಕುಗ್ಗದೇ ದೃಢಸಂಕಲ್ಪ ಹೊಂದಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಹಿಳಾ ಸಬಲೀಕರಣಕ್ಕಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ ₹2 ಸಾವಿರ ಹಾಗೂ ಸ್ವಾವಲಂಬಿ ಜೀವನಕ್ಕೆ ಅಕ್ಕಪಡೆ ಸೇರಿದಂತೆ ಅನೇಕ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಬದುಕಿಗೆ ಅನುಕೂಲವಾಗಿವೆ. ಒಂದು ಕಾಲದಲ್ಲಿ ಮಹಿಳೆ ತನ್ನ ತವರುಮನೆಗೆ ಹೋಗಬೇಕೆಂದರೆ ದುಡ್ಡು ಇರುತ್ತಿರಲಿಲ್ಲ. ಉಚಿತ ಬಸ್ ಪ್ರಯಾಣದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಗಂಡು ಮತ್ತು ಹೆಣ್ಣು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಇವರಿಬ್ಬರೂ ಸಮಾನರಾಗಿದ್ದಾಗ ಮಾತ್ರ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಹೆಣ್ಣು ಗೌರವದ ಪ್ರತೀಕವಾಗಿದ್ದು, ಹೆಣ್ಣನ್ನು ಭಾರತ ಮಾತೆಗೆ ಹೋಲಿಸುತ್ತಾರೆ. ಎಲ್ಲ ಮಹಿಳೆಯರಿಗೆ ಸ್ಥಾನಮಾನ ಇಲ್ಲವೋ ಅಲ್ಲಿ ಅಭಿವೃದ್ಧಿ ಕುಂಟಿತಗೊಂಡಿರುತ್ತದೆ. ಮಹಿಳೆಯರಿಗೆ ಸಮಾನ ಅವಕಾಶ, ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ ಒದಗಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವೆಂದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಮಹಿಳೆ ಎಂದರೆ ಒಂದು ವ್ಯಕ್ತಿ ಮಾತ್ರವಲ್ಲ, ಅವಳು ತಾಯಿ, ಸಹೋದರಿ, ಪತ್ನಿ, ಶಿಕ್ಷಕಿ ಮತ್ತು ಸಮಾಜದ ಮಾರ್ಗದರ್ಶಕಿ ಕೂಡ ಆಗಿದ್ದಾಳೆ. ಕುಟುಂಬದ ಬೆಳವಣಿಗೆಗೂ, ಸಮಾಜದ ಅಭಿವೃದ್ದಿಗೂ ಮಹಿಳೆಯರ ಪಾತ್ರ ಅತೀ ಮಹತ್ತರವಾಗಿದೆ. ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿರಬೇಕು ಅಂದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, ಮಹಿಳೆಯರಿಗೆ ಸಮಾನ ಅವಕಾಶ, ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ ಒದಗಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರ ಹಕ್ಕು ಮತ್ತು ಸಮಾನತೆ ಬಗ್ಗೆ ಬೆಳಕು ಚೆಲ್ಲಬೇಕಿದೆ. ಮಹಿಳೆಯರ ಗೌರವ ಮತ್ತು ಸಮಾನತೆ ಕಾಪಾಡುವ ಸಮಾಜ ನಿರ್ಮಾಣವಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನವನಗರದ ಮಹಿಳಾ ಪೊಲೀಸ್ ಠಾಣೆಯ ಡಿಎಸ್ಪಿ ಗಿರೀಶ ಭೋಜನ್ನವರ ಮಹಿಳೆಯರಿಗಾಗಿ ಸೈಬರ್ ಸುರಕ್ಷತೆ, ಕೃಷಿ ವಿಜ್ಞಾನ ಕೇಂದ್ರದ ತಜ್ಞೆ ಡಾ.ರಮೀತ ಬಿ.ಈ ಮಹಿಳೆಯರಲ್ಲಿ ಮಾನಸಿಕ ಒತ್ತಡ ನಿರ್ವಹಣೆ ಹಾಗೂ ಪೌಷ್ಟಿಕ ಆಹಾರ ಕುರಿತು ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಚಂದ್ರಶೇಖರ ದಿಡ್ಡಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಪ್ರತಿಜ್ಞಾವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ, ಯೋಜನಾ ನಿರ್ದೇಶಕ ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ವೀಣಾ, ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿ ವಿಜೇತರಿಗೆ ಸನ್ಮಾನ:ಜಿಲ್ಲಾ ಮಟ್ಟದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಪಡೆದ ಸಂಗಮೇಶ ತೋಳಮಟ್ಟಿ, ನಂದಿನಿ ಲಮಾಣಿ (ಕ್ರೀಡೆ-ಸೈಕ್ಲಿಂಗ್) ಅನಘಾ ಪಾಟೀಲ (ಕಲೆ-ಸಂಗೀತ), ಚಿದಾನಂದ ಜವಳಗಿ (ನಾವಿನ್ಯತೆ) ಇವರನ್ನು ಸನ್ಮಾನಿಸಲಾಯಿತು.