ಸಾರಾಂಶ
- ಮಹಿಳಾ ದಿನ ಅಂಗವಾಗಿ ನಡೆದ ಜಿಲ್ಲಾಮಟ್ಟದ ಬಹಿರಂಗ ಕಾರ್ಯಕ್ರಮದಲ್ಲಿ ಸಿದ್ದಯ್ಯ ಹಿರೇಮಠ ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಮಹಿಳಾ ದಿನವು ಕ್ಲಾರಾ ಜೆಟ್ ಕಿನ್ ಘೋಷಿಸಿದ ಮಹಿಳೆಯರ ಹಕ್ಕುಗಳ ದಿನವಾಗಿದೆ. ಆದರೆ, ಇಂದು ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಕೃತಿಯ ಕಾರಣದಿಂದ ಮಹಿಳೆಯರು, ಮಕ್ಕಳ ಮೇಲೆ ಹೆಚ್ಚಿನ ದೌರ್ಜನ್ಯಗಳು ನಡೆಯುತ್ತಿವೆ. ಪುರುಷ ಪ್ರಧಾನ ಧೋರಣೆ ಮತ್ತು ಮಹಿಳೆಯನ್ನು ಭೋಗದ ವಸ್ತುವನ್ನಾಗಿ ಬಿಂಬಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ ಅಭಿಪ್ರಾಯಪಟ್ಟರು.ನಗರದ ಜಯದೇವ ವೃತ್ತದಲ್ಲಿ ಶನಿವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್), ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ನಡೆದ ಜಿಲ್ಲಾಮಟ್ಟದ ಬಹಿರಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ. ಶಿಕ್ಷಣ ಸಾಧನೆಯತ್ತಲೂ ಹೆಚ್ಚು ಸಾಗಬೇಕಾಗಿದೆ. ಆಗ ಮಾತ್ರ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಪ್ರಶ್ನಿಸಲು ಸಾಧ್ಯ. ಪ್ರಸ್ತುತ ಅಶ್ಲೀಲ ಅಂತರ್ಜಾಲಗಳ ಬಳಕೆಯಿಂದ ವಿದ್ಯಾರ್ಥಿಗಳು, ಯುವಜನರು ದಾರಿ ತಪ್ಪುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಅನುರಾಧಾ ಮಾತನಾಡಿ, ಮಾರ್ಚ್ 8, 1908 ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸಿದ್ಧ ಉಡುಪು ಕಾರ್ಖಾನೆಯ ಸಾವಿರಾರು ಮಹಿಳಾ ಕಾರ್ಮಿಕರು ಬೀದಿಗಿಳಿದರು. ದುಡಿಯುವ ಸ್ಥಳಗಳಲ್ಲಿ ಉಸಿರುಗಟ್ಟಿಸುವ ವಾತಾವರಣ ಖಂಡಿಸಿ, ದುಡಿಮೆಯ ಕಾಲಾವಧಿ ದಿನಕ್ಕೆ 8 ಗಂಟೆಗೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಸಮಾನ ವೇತನಕ್ಕಾಗಿ, ಹೆರಿಗೆಯ ರಜೆ ಹಕ್ಕಿಗಾಗಿ ಧ್ವನಿ ಎತ್ತಿದರು. ಹೋರಾಟನಿರತ ಮಹಿಳಾ ಕಾರ್ಮಿಕರ ಮೇಲೆ ಅಲ್ಲಿನ ಆಳ್ವಿಕರು ಗುಂಡಿನ ಮಳೆಗರೆದರು. ಇಷ್ಟಾದರೂ, ಹೋರಾಟದಿಂದ ಹಿಂದೆ ಸರಿಯದೇ ಮಹಿಳಾ ಕಾರ್ಮಿಕರು ಗುಂಡಿಗೆ ಎದೆಯೊಡ್ಡಿ ನಿಂತರು. ನ್ಯೂಯಾರ್ಕ್ ಬೀದಿಗಳು ಕೆಂಪಾದವು. ಈ ಐತಿಹಾಸಿಕ ಹೋರಾಟದ ಸ್ಫೂರ್ತಿ ವಿಶ್ವದಾದ್ಯಂತ ಹಲವು ಮಹಿಳಾ ಹೋರಾಟಗಳಿಗೆ ನಾಂದಿ ಹಾಡಿತು. ಖ್ಯಾತ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ ಕಿನ್ 1910ರ ಅಂತರಾಷ್ಟ್ರೀಯ ಸಮಾಜವಾದಿ ಮಹಿಳಾ ಕಾಂಗ್ರೆಸ್ ನಲ್ಲಿ ಮಾರ್ಚ್ 8ನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿದರು ಹಾಗೂ ಈ ದಿನದಂದು ಮಹಿಳೆಯರು ತಮ್ಮ ತಮ್ಮ ದೇಶಗಳಲ್ಲಿನ ವಿವಿಧ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಕರೆ ನೀಡಿದರು ಎಂದು ತಿಳಿಸಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ ಇತರರು ಮಾತನಾಡಿದರು. ಈ ಸಂದರ್ಭ ಎಐಎಮ್‌ಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷೆ ಬನಶ್ರೀ, ಜಿಲ್ಲಾ, ಜಿಲ್ಲಾ ಕಾರ್ಯದರ್ಶಿ ಭಾರತಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.- - - -8ಕೆಡಿವಿಜಿ43.ಜೆಪಿಜಿ:
ದಾವಣಗೆರೆಯಲ್ಲಿ ಎಐಎಂಎಸ್‌ಎಸ್, ಎಐಯುಟಿಯುಸಿ ಸಂಘಟನೆಯಿಂದ ನಡೆದ ಜಿಲ್ಲಾಮಟ್ಟದ ಬಹಿರಂಗ ಸಭೆಯಲ್ಲಿ ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ ಮಾತನಾಡಿದರು.