ನಾಡಿನ ಜನರ ನೆಮ್ಮದಿ, ಸಮೃದ್ಧಿಗಾಗಿ ಸ್ವಾಮೀಜಿಗಳು ತ್ಯಾಗ ಮನೋಭಾವದಿಂದ ತಪಸ್ಸು ಆಚರಿಸುತ್ತಾರೆ. ಸ್ವಾರ್ಥ ರಹಿತವಾಗಿ ನಾಡಿನ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸುವವರಿಗೆ ಖಂಡಿತ ಫಲ ಸಿಗಲಿದೆ. ಅನೇಕರಿಗೆ ಜ್ಞಾನವಿದ್ದರೂ ಅರ್ಧ ದಾರಿಯಲ್ಲಿಯೇ ಕಳೆದುಕೊಳ್ಳುತ್ತಾರೆ. ಸರ್ವವನ್ನೂ ತ್ಯಾಗ ಮಾಡಿದ ಸ್ವಾಮೀಜಿಗಳಷ್ಟೇ ಪೀಠದ ಮೇಲೆ ಕುಳಿತುಕೊಳ್ಳಲು ಸಾಧ್ಯ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಹಿಳೆಯರು ದೃಢ ಮನಸ್ಸಿನಿಂದ ಹೆಜ್ಜೆ ಇಟ್ಟರೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಅವರ ಮನಸ್ಸು ಒಂದೆಡೆ ಕೇಂದ್ರೀಕರಿಸಿದರೆ ಎಲ್ಲವೂ ಸಾಧ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಗುರುವಾರ ನಡೆದ ಚಂದ್ರವನ ನವರಾತ್ರಿ ಉತ್ಸವದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿಯೂ ಆದಿಶಕ್ತಿಯಂತಹ ಶಕ್ತಿ ಇರುತ್ತದೆ. ಹೀಗಾಗಿ ಮಹಿಳೆಯರು ದೃಢ ಸಂಕಲ್ಪ ಕೈಗೊಂಡರೆ ಪಾರ್ವತಿಯ ಪ್ರತಿರೂಪವೇ ಆಗಿ ಗುರಿ ಮುಟ್ಟಬಹುದು ಎಂದರು.
ನಾಡಿನ ಜನರ ನೆಮ್ಮದಿ, ಸಮೃದ್ಧಿಗಾಗಿ ಸ್ವಾಮೀಜಿಗಳು ತ್ಯಾಗ ಮನೋಭಾವದಿಂದ ತಪಸ್ಸು ಆಚರಿಸುತ್ತಾರೆ. ಸ್ವಾರ್ಥ ರಹಿತವಾಗಿ ನಾಡಿನ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸುವವರಿಗೆ ಖಂಡಿತ ಫಲ ಸಿಗಲಿದೆ. ಅನೇಕರಿಗೆ ಜ್ಞಾನವಿದ್ದರೂ ಅರ್ಧ ದಾರಿಯಲ್ಲಿಯೇ ಕಳೆದುಕೊಳ್ಳುತ್ತಾರೆ. ಸರ್ವವನ್ನೂ ತ್ಯಾಗ ಮಾಡಿದ ಸ್ವಾಮೀಜಿಗಳಷ್ಟೇ ಪೀಠದ ಮೇಲೆ ಕುಳಿತುಕೊಳ್ಳಲು ಸಾಧ್ಯ. ವೇದಿಕೆಯಲ್ಲಿರುವ ಎಲ್ಲ ಸ್ವಾಮೀಜಿಗಳೂ ಅಂತಹವರ ಸಾಲಿಗೆ ಸೇರಿದವರು ಎಂದರು.ಚಿಕ್ಕಮಗಳೂರಿನ ಗೌರಿಗದ್ದೆಯ ಅವಧೂತ ಶ್ರೀವಿನಯ್ ಗುರೂಜಿ ಮಾತನಾಡಿ, ಲೋಕದ ಒಳಿತಿಗೆ ಮಠದ ಸನ್ಯಾಸಿಯಾದವನು ಅನ್ನಯಜ್ಞ, ಜ್ಞಾನ ಯಜ್ಞ, ಆರೋಗ್ಯ ಯಜ್ಞ, ಗೋ ಯಜ್ಞ ಮತ್ತು ಪ್ರಕೃತಿ ಯಜ್ಞ ಎಂಬ ಈ ಪಂಚಯಜ್ಞಗಳನ್ನು ನೆರವೇರಿಸಬೇಕು ಎಂದರು.
ಚಂದ್ರವನ ಶ್ರೀಗಳು ಕೇವಲ ಧಾರ್ಮಿಕ ಪೂಜಾ ಆಚರಣೆ ನಡೆಸುತ್ತಿಲ್ಲ. ಬದಲಿಗೆ ನವರಾತ್ರಿಯಂತಹ ಧಾರ್ಮಿಕ ಆಚರಣೆಯಲ್ಲಿ ಉತ್ತರ, ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಜನರು-ಜನಪ್ರತಿನಿಧಿಗಳೊಂದಿಗೆ ನೆರೆಯ ತಮಿಳುನಾಡಿನವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಕರೆತಂದು ಒಂದೂಗೂಡಿಸಿ ನಮ್ಮಲ್ಲಿ ಸೌಹರ್ದ ಮತ್ತು ಸಹಬಾಳ್ವೆಯ ನೀತಿಯನ್ನು ಅನುಸರಿಸಿ ಅಳವಡಿಸಿಕೊಳ್ಳುವಂತೆ ಮಾಡಿದೆ ಎಂದು ತಿಳಿಸಿದರು.ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ನಾನು ಶ್ರೀಮಠದ ಭಕ್ತ. ಅಚಲ ನಂಬಿಕೆ ಹೊಂದಿದ್ದು ಶ್ರೀಗಳು ಮತ್ತು ಆಶ್ರಮದ ಪವಾಡ ಕಂಡಿದ್ದೇನೆ. ಹೀಗಾಗಿ ಶ್ರೀಮಠದ ಪುತ್ರನಾಗಿಯೇ ನಾನು ಸೇವೆ ಮಾಡುವೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಯಾರಲ್ಲಾದರೂ ದಾರಿದ್ರ್ಯ ಎಂಬುದು ಕಾಡಿದ್ದರೆ ಶ್ರೀಮಠ ನೀಡುವ ಈ ಮಡಿಲಕ್ಕಿ ಹೋಗಲಾಡಿಸಲಿದೆ. ತಾಯಿ ಜಗನ್ಮಾಥೆ ಹಾಗೂ ಕುಲದೇವತೆ ಆರಾಧನೆಯೊಂದಿಗೆ ಶಾಂತಿ-ಸಮಾಧಾನದಿಂದ ಸರ್ವರಿಗೂ ಒಳಿತಾಗಲಿದೆ. ಶ್ರೀಮಠವೂ ಪ್ರತಿಯೋರ್ವ ಮಹಿಳೆಯರಿಗೆ ತಾಯಿಯಂತೆ, ಸಹೋದರನಂತೆ, ಮಗನಂತೆ ಇದು ತವರಿನ ನೆಲೆಯಂತೆ ನಿಮ್ಮ ಹಿತ ಕಾಯಲಿದೆ ಎಂದರು.ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಮಠದ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು.
ಸಮಾರಂಭದಲ್ಲಿ ಲೇಖಕಿ ಡಾ.ಎಂ.ಎಸ್.ಮಧುಮತಿ ಬರೆದಿರುವ ಶ್ರೀ ಮಹರ್ಷಿ ಪತಂಜಲಿ ಯೋಗ ಸೂತ್ರಗಳು ಗ್ರಂಥ ಲೋಕಾರ್ಪಣೆ ಮಾಡಲಾಯಿತು.ಡಿಎಸ್ ಮ್ಯಾಕ್ಸ್ನ ಮಾಲೀಕ ಡಾ.ಎಸ್.ಪಿ.ದಯಾನಂದ್ ಅವರಿಗೆ ರಾಷ್ಟ್ರಮಠದ ಶ್ರೇಷ್ಠ ಕಾವೇರಿ ಪ್ರಶಸ್ತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಕೀಲ ಡಾ.ಎಂ.ಪುಟ್ಟೇಗೌಡ ಅವರಿಗೆ ಕಾಯಕ ಸೇವಾ ಧುರೀಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಲಪ್ರತಿಭೆ ಮಾ.ಕೃತಿನ್.ಆರ್ ಅವರಿಗೆ ‘ಬಾಲಪ್ರತಿಭಾ ರತ್ನ’ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಇದಕ್ಕೂ ಮುನ್ನ ಮಠಕ್ಕೆ ಸೇರಿದ ರೋಬೋಟಿಕ್ ಆನೆಗೆ ಚಾಲನೆ ನೀಡಲಾಯಿತು. ನಂತರ ನೆರೆದಿದ್ದ ಮಹಿಳೆಯರಿಗೆ ಬಾಗಿನ ವಿತರಿಸಲಾಯಿತು. ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ್, ತಮಿಳುನಾಡಿನ ಊಟಿಯ ಉದಕಮಂಡಲದ ಶಾಸಕ ಎಂ.ಭೋಜರಾಜನ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಮುಖಂಡರಾದ ಮಹಾಲಿಂಗೇಗೌಡ ಮುದ್ದನಘಟ್ಟ ಸೇರಿದಂತೆ ಮತ್ತಿತರರಿದ್ದರು.ಹುಣಸೂರು ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್, ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ನಾಗಮ್ಮ ದಂಪತಿಗಳು ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ದಂಪತಿ ಸಮೇತ ಭಾಗಿ ಧಾರ್ಮಿಕ ಪೂಜಾ ಕಾರ್ಯದಲ್ಲಿ ಭಾಗಿಯಾಗುವ ಜೊತೆಗೆ ಶ್ರೀಮಠಕ್ಕೆ ಕೊಡುಗೆಯಾಗಿ ಆಗಮಿಸಿದ್ದ ರೋಬೋಟಿಕ್ ಆನೆಯನ್ನು ಲೋಕಾರ್ಪಣೆಗೊಳಿಸಿದರು.