ಸಾರಾಂಶ
ದಾವಣಗೆರೆ : ಮಹಾನ್ ಮಾನವತಾವಾದಿ ಬಸವಣ್ಣನವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ನಮ್ಮ ಬಗ್ಗೆ ಹೇಳಿಕೆ ನೀಡುವ ಮೊದಲು ತಾವು ಸಮಾಜಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ತಿಳಿಸಬೇಕು. ಈವರೆಗೆ ನೀವೂ ಸಮಾಜದವರೆಂಬ ಒಂದೇ ಕಾರಣಕ್ಕೆ ನಿಮ್ಮ ಹುಚ್ಚಾಟಗಳನ್ನೆಲ್ಲಾ ಸಹಿಸಿಕೊಂಡಿದ್ದೆವು. ಇಂತಹ ಹುಚ್ಚಾಟಗಳಿಗೆ ಇತಿಶ್ರೀ ಹಾಡುವುದು ಸಮಾಜ ಹಾಗೂ ತಮ್ಮ ದೃಷ್ಟಿಯಿಂದಲೂ ಒಳ್ಳೆಯದೆಂದು ಭಾವಿಸುತ್ತೇವೆ. ಮಹಾಸಭೆಗೆ ಇಂತಹ ಹುಚ್ಚಾಟಗಳನ್ನು ನಿಲ್ಲಿಸಲು ಬರುತ್ತದೆ ಎಂಬುದಾಗಿ ಈ ಮೂಲಕ ಎಚ್ಚರಿಸುತ್ತಿದ್ದೇವೆ. ಇಲ್ಲವಾದರೆ, ಸಮಾಜವೇ ತಮ್ಮನ್ನು ಹೊಳೆಗೆ ಅಲ್ಲ, ಹಾಳು ಬಾವಿಗೆ ನೂಕುತ್ತದೆ. ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಸಿದ್ದಾರೆ.
ನಾಲಿಗೆ ಕುಲ ಹೇಳುತ್ತದೆಂಬ ಮಾತಿದೆ. ಯತ್ನಾಳ್‌ರ ಹೇಳಿಕೆಗಳು, ನಡವಳಿಕೆಗಳನ್ನು ಗಮನಿಸಿದಾಗ ನೀವು ವೀರಶೈವ ಲಿಂಗಾಯತರೇ ಎಂಬ ಅನುಮಾನ ಮೂಡುತ್ತದೆ. ವಿಶ್ವಾದ್ಯಂತ ಇಂದು ಬಸವಣ್ಣರ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಇದನ್ನು ಸಹಿಸದ ಆ ಒಂದು ವರ್ಗ ನಿಮ್ಮಿಂದ ಇಂತಹ ಹೇಳಿಕೆಗಳನ್ನು ಹೇಳಿಸುತ್ತಿದೆ ಎಂಬುದಾಗಿ ಭಾವಿಸಬೇಕಾಗುತ್ತದೆ. ಅಂದು ಬಸವಣ್ಣ ಮತ್ತು ಬಸವಣ್ಣನವರ ವಿಚಾರಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಿದ ಸಂಘಟನೆ ನೇತೃತ್ವ ವಹಿಸಿದವರ ಸಂಘಟನೆಯಲ್ಲಿರುವ ತಮ್ಮಿಂದ ನಿರೀಕ್ಷಿಸುವುದಾದರೂ ಏನನ್ನು ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಲಿಂಗಾಯತ ಸಮಾಜದಲ್ಲಿ ಜನಿಸಿದಕ್ಕಾದರೂ ಈ ಧರ್ಮದ ಬೆಳಕಾಗಿರುವ ಬಸವಣ್ಣ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡೋದು ನಿಲ್ಲಿಸಿ. ಮಹಾಸಭೆ ಗೌರವಾಧ್ಯಕ್ಷ ಡಾ.ಭೀಮಣ್ಣ ಖಂಡ್ರೆ, ಸಮಾಜದ ಜನನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ನಾನು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಅರಿತುಕೊಳ್ಳದೇ, ವಿನಾಕಾರಣ ನಮ್ಮ ಬಗ್ಗೆ ಮಾತನಾಡಿರುವುದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.