ಸಾರಾಂಶ
ದಾವಣಗೆರೆ: ನೀವು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದರೆ ಅದು ದಾದಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಎಸಗುವ ದ್ರೋಹ. ಅವರನ್ನು ಅವಮಾನ ಮಾಡಿದಂತೆ ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ, ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯಕುಮಾರ ಹೇಳಿದರು.
ತಾಲೂಕಿನ ಮಾಯಕೊಂಡ ಪಟ್ಟಣದ ಎ.ಕೆ. ಕಾಲನಿಯಲ್ಲಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಜಯಂತ್ಯುತ್ಸವ ಹಾಗೂ ಡಿಎಸ್‌ಎಸ್ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಉತ್ತಮ ಶಿಕ್ಷಣ, ಲೋಕಜ್ಞಾನ ಪಡೆದರೆ ಎಲ್ಲವನ್ನೂ ಸಾಧಿಸಬಹುದೆಂದು ಅಂಬೇಡ್ಕರ್ ಸಾರಿ ಹೇಳಿದ್ದಾರೆ. ಬಾಬಾ ಸಾಹೇಬ್ ಅವರ ಬಳಿ ಲೆಕ್ಕವಿಲ್ಲದಷ್ಟು ಪುಸ್ತಕಗಳ ಭಂಡಾರವೇ ಇತ್ತು. ಜ್ಞಾನ ಸಂಪಾದನೆಯಿಂದ ಅಂಬೇಡ್ಕರ್ ವಿಶ್ವವೇ ತಿರುಗಿ ನೋಡುವಂತಹ ಸಾಧನೆ ಮಾಡಿದರು. ಅಂಬೇಡ್ಕರ್ ಜಯಂತಿ ಉದ್ದೇಶ ಕೇವಲ ಭಾಷಣವಲ್ಲ. ಕನಿಷ್ಠ ಪದವಿ ಪಡೆದು ದಾವಣಗೆರೆ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವಂತಾಗಬೇಕೆಂಬ ಸಂಕಲ್ಪ ಮಾಡುವ ಸಮಾರಂಭವಾಗಬೇಕು. ನಿಮ್ಮ ಮಕ್ಕಳು ಐಎಎಸ್, ಐಪಿಎಸ್ ಅಥವಾ ಕೆಎಎಸ್ ಮಾಡುತ್ತಾರೆಂದರೆ, ಅವರನ್ನು ನಮ್ಮ ಬಳಿಗೆ ಕಳಿಸಿ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶಾಸಕರು ಏನು ಮಾಡಲಾಗುತ್ತದೆಂದು ಜನ ಹೇಳುತ್ತಾರೆ. ನಾವು ಅಸಹಾಯಕವಾಗಿ ಬದುಕುವಂಥ ಪರಿಸ್ಥಿತಿಯಲ್ಲಿದ್ದೇವೆ. ನೀವು ಆರಿಸಿ ಕಳುಹಿಸಿದ ಸಚಿವರು, ಸಂಸದರು ಎಲ್ಲ ಬೇಡಿಕೆ ಈಡೇರಿಸುತ್ತೇವೆ, ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇವೆಂದು ಹೇಳಿದ್ದರು. ಆದರೆ. ನಿಮ್ಮ ಸಮಸ್ಯೆಗಳು ಪರಿಹಾರ ಆಗಿವೆಯಾ? ಒಮ್ಮೆಯಾದರೂ ಇಲ್ಲಿಗೆ ಬಂದು ನಿಮ್ಮ ಸಂಕಷ್ಟಗಳನ್ನು ಕೇಳಿದ್ದಾರಾ ಎಂದು ಜಿ.ಬಿ.ವಿನಯಕುಮಾರ ಗ್ರಾಮಸ್ಥರನ್ನು ಪ್ರಶ್ನಿಸಿದರು. ರೈತ ಹೋರಾಟಗಾರರಾದ ಪ್ರತಾಪ ಗೌಡ, ಅಶೋಕ, ಹಿಂಡಸಗಟ್ಟೆ ಹನುಮಂತಪ್ಪ, ಟಿ.ರವಿಕುಮಾರ, ಮಧುಕುಮಾರ, ಕಲ್ಲೇಶ, ರಾಘವೇಂದ್ರ ಮತ್ತಿತರರು ಹಾಜರಿದ್ದರು.- - -
(ಟಾಪ್ ಕೋಟ್)ಮಾಯಕೊಂಡ ಸರ್ಕಾರಿ ಆಸ್ಪತ್ರೆಯಲ್ಲಿ 6 ತಿಂಗಳಿಂದ ವೈದ್ಯರೇ ಇಲ್ಲ. ವಿದ್ಯುತ್ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ನಾವು ಯಾವ ಶತಮಾನದಲ್ಲಿ ಬದುಕುತ್ತಿದ್ದೇವೆಂಬ ಪ್ರಶ್ನೆ ಎದ್ದಿದೆ. ದಿನದ 24 ಗಂಟೆ ಜನರಿಗೆ ವಿದ್ಯುತ್ ಸೌಲಭ್ಯ ಕೊಡಿಸುವ ಹಾಗೂ ವೈದ್ಯರನ್ನು ಕರೆ ತರುವ ಶಕ್ತಿ ನಮ್ಮಲ್ಲಿ ಇಲ್ಲದಂತಾಗಿದೆ. ಇದು ಬೇಸರದ ಸಂಗತಿ.- ಜಿ.ಬಿ.ವಿನಯಕುಮಾರ, ರಾಜ್ಯಾಧ್ಯಕ್ಷ
- - --26ಕೆಡಿವಿಜಿ8:
ಸಮಾರಂಭದಲ್ಲಿ ಜಿ.ಬಿ.ವಿನಯಕುಮಾರ ಮಾತನಾಡಿದರು.