ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಲವು ಕ್ಷೇತ್ರಗಳಲ್ಲಿ ಗ್ರಾಹಕ ಇಂದು ಒಂದಲ್ಲ ಒಂದು ರೀತಿಯಲ್ಲಿ ಮೋಸ ಹಾಗೂ ವಂಚನೆಗೆ ಒಳಗಾಗುತ್ತಿದ್ದಾನೆ. ಆದ್ದರಿಂದ ಇವುಗಳ ಬಗ್ಗೆ ಗ್ರಾಹಕ ಎಚ್ಚರಿಕೆಯಿಂದ ಇರಬೇಕು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ (ಎಬಿಜಿಪಿ) ಜಿಲ್ಲಾಘಟಕದ ಕಾರ್ಯದರ್ಶಿ ಡಾ.ಎಂ.ಜಿ.ದೀಕ್ಷಿತ ಹೇಳಿದರು.ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ, ಎಬಿಜಿಪಿ ಜಿಲ್ಲಾ ಘಟಕ ಮತ್ತು ಎನ್ಎಸ್‌ಎಸ್ ಘಟಕಗಳ ಆಶ್ರಯದಲ್ಲಿ ನಡೆದ ಗ್ರಾಹಕ ಹಕ್ಕು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಇದ್ದಲ್ಲಿ ತಮಗಾಗುವ ಮೋಸ ತಡೆಯಬಹುದು. ಗ್ರಾಹಕರಿಗೆ ಈ ದಿಶೆಯಲ್ಲಿ ಅರಿವು ಮೂಡಿಸಿ ಅವರ ಹಿತರಕ್ಷಣೆ ಮಾಡುವ ಉದ್ದೇಶ ಎಬಿಜಿಪಿ ಹೊಂದಿದ್ದು, ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಎಬಿಜಿಪಿ ಕಾನೂನು ಸಲಹೆಗಾರ ಜಯತೀರ್ಥ ಕುಲಕರ್ಣಿ ಮಾತನಾಡಿ, ಗ್ರಾಹಕ ಮಾರುಕಟ್ಟೆ ರಾಜನಾಗಿದ್ದರೂ ಬಹಳಷ್ಟು ಜನರಿಗೆ ಮೋಸ ಹಾಗೂ ಅನುಚಿತ ವ್ಯವಹಾರಗಳ ಬಗ್ಗೆ ಕಲ್ಪನೆಯಿಲ್ಲ. ಇವರ ಹಿತಾಸಕ್ತಿ ಕಾಪಾಡಲು ಇರುವ ಕಾನೂನಿನ ಬಗ್ಗೆ ಜನತೆ ತಿಳಿದುಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಶ್ರೀನಿವಾಸ ನರಗುಂದ, ಗ್ರಾಹಕರು ತಮಗಾದ ಶೋಷಣೆ ವಿರುದ್ಧ ಧ್ವನಿ ಎತ್ತಬೇಕಾದರೆ ಅವರಿಗೆ ತಮಗಿರುವ ಹಕ್ಕುಗಳ ಬಗ್ಗೆ ಅರಿವು ಇರಬೇಕು. ವಿದ್ಯಾರ್ಥಿಗಳು ತಮ್ಮ-ತಮ್ಮ ಪರಿಸರದಲ್ಲಿ ಈ ವಿಷಯವಾಗಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವುದರ ಮೂಲಕ ಗ್ರಾಹಕರನ್ನು ಸಂಘಟಿಸುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನದ ಕ್ಷಿತಿಜ ವಿಸ್ತರಿಸಬಲ್ಲ ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಲು ಸಲಹೆ ನೀಡಿದರು.
ಎಬಿಜಿಪಿ ಸದಸ್ಯರಾದ ಚಂದ್ರಕಲಾ ಪಾಟೀಲ ಮತ್ತು ಲತಾ ಶೀಲವಂತರ ಗ್ರಾಹಕ ಗೀತೆ ಸಾದರಪಡಿಸಿದರು. ಸಂಯೋಜಕ ಪ್ರೊ.ಎಸ್.ಎಸ್.ಹಂಗರಗಿ ಸ್ವಾಗತಿಸಿ, ಉಪನ್ಯಾಸಕಿ ಎಸ್.ಪಿ.ದೇಶಪಾಂಡೆ ನಿರೂಪಿಸಿ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಶ್ರವಣಾ ಸಿದ್ನಾಳ ವಂದಿಸಿದರು. ಎನ್ಎಸ್‌ಎಸ್. ಅಧಿಕಾರಿಗಳಾದ ಎಸ್.ವೈ.ಬೊಮ್ಮಣ್ಣವರ, ಎಸ್.ಎಂ.ಹಡಪದ, ಜಂಟಿ ಕಾರ್ಯದರ್ಶಿ ಡಾ.ಎಸ್.ಬಿ.ಪರ್ವತೀಕರ, ಎಬಿಜಿಪಿ ಸದಸ್ಯೆ ಅರ್ಚನಾ ಬಳೂಲಮಠಇದ್ದರು.