ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ವಿದ್ಯಾರ್ಥಿಗಳು ಕುವೆಂಪು ಅವರ ಕೃತಿ ಓದಲು ನಿರತರಾದರೆ ಅವರ ಜೀವನ ವಿಕಾಸ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಹೇಳಿದರು.ಪಟ್ಟಣದ ಶ್ರೀಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ, ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಸಹಯೋಗದಲ್ಲಿ ಬಿಜಿಎಸ್ ಸಭಾ ಭವನದಲ್ಲಿ ಆಯೋಜಿಸಿದ್ದ ನಮ್ಮ ಕುವೆಂಪು ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಉನ್ನತ ಮಟ್ಟಕ್ಕೇರಿದವರೆಲ್ಲ ಪುಸ್ತಕದ ಪ್ರೇಮಿ ಆಗಿದ್ದರು. ವಿದ್ಯಾರ್ಥಿ ದಿಸೆಯಲ್ಲಿ ಪುಸ್ತಕ ಪ್ರೇಮಿಗಳಾಗಿ ಧ್ಯಾನಸ್ಥರಾಗಬೇಕು ಎಂದರು.
ಕನ್ನಡ ಸಾಹಿತ್ಯದ 32 ಮಜಲುಗಳಲ್ಲಿ ಕುವೆಂಪು ಅವರು ತಮ್ಮ ಕೊಡುಗೆ ನೀಡಿದ್ದಾರೆ. ಸಾಹಿತ್ಯದಿಂದ ಜೀವನ ಪರಿಪೂರ್ಣವಾಗುತ್ತದೆ. ಯಾವುದೇ ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಉತ್ತಮ ಪುಸ್ತಕಗಳನ್ನು ನೀಡುವ ಪರಿಪಾಠ ಬೆಳೆಸಿಕೊಳ್ಳಿ ಎಂದರು.ರಾಷ್ಟ್ರಕವಿ ಕುವೆಂಪುರವರ ಮೈಸೂರಿನ ಉದಯರವಿ ಮನೆಯಲ್ಲಿ ಕುವೆಂಪುರವರು ಸರಸ್ವತಿ ವಿಗ್ರಹಕ್ಕೆ ನಾಗಮಂಗಲದ ಮಹಾಜನತೆ ಕೊಟ್ಟ ಪ್ರಶಸ್ತಿ ಎಂದು ಉಲ್ಲೇಖಿಸಿರುವ ಬಗ್ಗೆ ಸ್ಮರಿಸಿದರು.
ನಮ್ಮ ಕುವೆಂಪು ಕೃತಿ ಲೇಖಕ ನಾಡೋಜ ಜಿ.ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಜೀವನವನ್ನು ತಿಳಿಯಲು ಕುವೆಂಪು ಅವರನ್ನು ಓದಬೇಕು. ಕುವೆಂಪು ಅವರಂತೆ ಬೃಹತ್ ಗ್ರಂಥ ಬರೆದ ಮಹಾನ್ ಲೇಖಕ ಭಾರತದಲ್ಲಿಯೆ ಇಲ್ಲ. ಕನ್ನಡ ಭಾಷೆ ಸೊಬಗನ್ನು ನಿಮ್ಮ ಮುಂದಿನ ಪೀಳಿಗೆಗೆ ರವಾನಿಸುವ ಗುರುತರ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು.ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ವಿದ್ಯಾರ್ಥಿಗಳು ಕಣಜಗಳಾಗಬಾರದು ಭತ್ತದ ಗದ್ದೆಗಳಾಗಬೇಕು. ಪುಸ್ತಕದ ಜ್ಞಾನದ ಜೊತೆಗೆ ಲೋಕ ಜ್ಞಾನ ಮುಖ್ಯ. ಆಗ ಮಾತ್ರ ಬದುಕು ಸಹನೀಯ. ಪುಸ್ತಕಗಳು ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತವೆ ಎಂದರು.
ಕುವೆಂಪು ಕವಿ, ಲೇಖಕರ ಟೀಕಾಕಾರ ಸಾಹಿತಿ ಆಗಿದ್ದಾರೆ. ಓದಿನ ಕೊರತೆ ನಮ್ಮನ್ನು ಸ್ವಾರ್ಥದ ಹಾದಿಗೆ ನಿಲ್ಲಿಸಿದೆ. ಮನಸ್ಸು ಶುದ್ಧವಾಗಬೇಕಾದರೆ ಸಾಹಿತ್ಯ ಓದುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೃದಯವನ್ನು ತಲುಪುವ ಸಾಹಿತ್ಯ ದೀರ್ಘ ಕಾಲ ಉಳಿಯುತ್ತದೆ. ನಮ್ಮ ಕುವೆಂಪು ಕೃತಿ ಉತ್ತಮವಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ವಿದ್ಯಾರ್ಥಿಗಳು ಕಲಿಕಾಸಕ್ತರಾಗಬೇಕು. ನಿಮ್ಮ ಬದುಕನ್ನು ಬದಲಿಸುವ ಭವಿಷ್ಯ ಕಟ್ಟಿ ಕೊಡುವ ಶಕ್ತಿ ಸಾಹಿತ್ಯಕ್ಕಿದೆ. ವಿದ್ಯಾರ್ಥಿಗಳೇ ಅಲ್ಲ ಸಮಾಜದಲ್ಲಿ ಎಲ್ಲರು ಅಧ್ಯಯನ ಶೀಲರಾಗಬೇಕು ಎಂದರು.
ಆತ್ಮಸಾಕ್ಷಿ ಮರೆತ ಕಾಲಘಟ್ಟದಲ್ಲಿ ನಾವಿದ್ದೇವೆ. ಮನುಷ್ಯ ಪ್ರಜ್ಞೆ ಜಾಗೃತವಾಗಬೇಕಿದೆ. ಮೌಲ್ಯಗಳಿಂದ ವಿಮುಖರಾಗುತ್ತಿದ್ದೇವೆ. ಸಾಹಿತ್ಯದ ಕಡೆಗಣನೆಯೇ ಸಮಾಜ ಅಧಃಪಥನದತ್ತ ಸಾಗುತ್ತಿದೆ. ಕಳೆದು ಹೋಗಿರುವ ಸೂಕ್ಷ್ಮತೆ ನಮ್ಮಲ್ಲಿ ಜಾಗೃತವಾಗಬೇಕಿದೆ. ಕುವೆಂಪು ಅವರನ್ನು ಅಧ್ಯಯನ ಮಾಡಿದಾಗ ಮಾತ್ರ ಇವೆಲ್ಲವೂ ಸಾಧ್ಯ ಎಂದರು.ಪಟ್ಟಣದ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ್ ಉಪಸ್ಥಿತರಿದ್ದರು. ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರದ ಪ್ರಧಾನ ಸಂಚಾಲಕ ದಯಾನಂದ ಕಟ್ಟೆ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.