ಸಾರಾಂಶ
ಕೊಪ್ಪಳ:
ಗ್ರಾಹಕರು ವ್ಯವಹಾರದಲ್ಲಿ ಮೋಸಹೋದರೆ ಸೂಕ್ತ ದಾಖಲೆಗಳೊಂದಿಗೆ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ್ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಗಡಿಗಳ ಮಾಲೀಕರು ವಸ್ತುಗಳ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ವಸ್ತು ಮಾರಾಟ ಮಾಡಿದರೆ, ನಾವು ಅವರಿಗೆ ಕಾನೂನಿನ ಮೂಲಕ ಮಾತನಾಡಬಹುದು. ಸಾಮಗ್ರಿಯ ಗುಣಮಟ್ಟ ಉತ್ತಮವಾಗಿದೆಯೇ, ಕೊಂಡುಕೊಳ್ಳಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದರು.
ಆನ್‌ಲೈನ್ ವ್ಯಾಪಾರ ಹೆಚ್ಚಾಗಿದ್ದು ಇರದಲ್ಲಿ ಮೋಸವಾದರೆ ಪರಿಹಾರ ಕೊಂಡುಕೊಳ್ಳಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇದೆ. ಇಲ್ಲಿ ದೂರು ಸಲ್ಲಿಸಿ, ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸೌಭಾಗ್ಯ ಲಕ್ಷ್ಮೀ, ಗ್ರಾಹಕರು ಮೊಬೈಲ್, ಟಿವಿ ಹಾಗೂ ಇನ್ನಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತು ಖರೀದಿಯಲ್ಲಿ ಅನ್ಯಾಯವಾದರೆ 2 ವರ್ಷದೊಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಸಮಸ್ಯೆಯನ್ನು ಆಯೋಗದಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಸೋಮಶೇಖರ ಬಿರಾದರ ಮಾತನಾಡಿ, ಈ ಬಾರಿಯ ಗ್ರಾಹಕರ ದಿನಾಚರಣೆಯನ್ನು ಸುಸ್ಥಿರ ಜೀವನ ಶೈಲಿಗೆ ಒಂದು ಸರಳ ಪರಿವರ್ತನೆ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಾಜು ಎನ್. ಮೇತ್ರಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ವರುಣಿ, ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಶಶಿಕಾಂತ ರಜಪೂತ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.