ಭಕ್ತಿಯಲ್ಲಿ ನಿಜವಿದ್ದರೆ ಭಗವಂತ ಒಲಿಯುತ್ತಾನೆ

| Published : Feb 05 2025, 12:30 AM IST

ಸಾರಾಂಶ

ನಗರದ ಸದಾಶಿವನಗರದ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ 29ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ತಿರು ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಸದಾಶಿವನಗರದ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ 29ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ತಿರು ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು.

ಕಾಗಿನೆಲೆ ಮಹಾಸಂಸ್ಥಾನ ಮಠದ ಈಶ್ವರಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿಗೆ ಎಲ್ಲೆಡೆ ಪ್ರಾಧಾನ್ಯತೆ ಇದೆ. ಉಡುಪಿಯ ಕೃಷ್ಣಮಠದಲ್ಲಿ ಕನಕದಾಸರಿಗೆ ಕೃಷ್ಣನ ದರ್ಶನಕ್ಕೆ ಅಡ್ಡಿಯಂಟಾದಾಗ, ಕನಕದಾಸರ ನಿಜ ಭಕ್ತಿಗೆ ಕೃಷ್ಣನೇ ಒಲಿದ ಪ್ರಸಂಗವನ್ನು ನಾವೆಲ್ಲರೂ ಪುರಾಣಗಳಲ್ಲಿ ಓದಿದ್ದೇವೆ. ಹಾಗೆಯೇ ನಿಮ್ಮ ಭಕ್ತಿಯಲ್ಲಿ ನಿಜವಿದ್ದರೇ ಭಗವಂತನೂ ಒಲಿಯುತ್ತಾನೆ ಎಂದರು.

29 ವರ್ಷಗಳ ಹಿಂದಿನಿಂದಲೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಾತ್ರಾ ಮಹೋತ್ಸವ ನಡೆಸುತ್ತಿರುವ ಮರಿಯಪ್ಪನವರ ಕುಟುಂಬದವರು ಭಗವಂತನ ನಿಜ ಭಕ್ತರು. ಸುಗ್ಗಿನಂತರ ಎಲ್ಲೆಡೆ ಜಾತ್ರೆ, ಉತ್ಸವಗಳು ನಡೆಯುತ್ತವೆ. ನಿಮ್ಮಗಳ ಜೊತೆಗೆ ನಿಮ್ಮ ಮಕ್ಕಳನ್ನು ಕರೆತಂದು, ಇಂತಹ ಆಚರಣೆಗಳನ್ನು ಪರಿಚಯಿಸುವುದರಿಂದ ಅದು ಮುಂದಿನ ಪೀಳಿಗೆಗೆ ಪಸರಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ವಿದ್ಯೆಯ ಜೊತೆಗೆ, ಲೋಕಜ್ಞಾನವು ಲಭ್ಯವಾಗಲಿದೆ ಎಂದರು.

ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀ ವೀರಬಸವ ಸ್ವಾಮೀಜಿ ಮಾತನಾಡಿ, 144 ವರ್ಷಗಳ ನಂತರ ಪ್ರಯಾಗರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದೆ. ಮುಕ್ತಿಗೆ ಭಕ್ತಿಯೊಂದೇ ಮಾರ್ಗ. ಹಾಗಾಗಿ ತಾವು ಮಾಡುವ ಕೆಲಸವನ್ನು ಭಕ್ತಿಯಿಂದ ಮಾಡಿದರೇ ಹೆಚ್ಚು ಉಪಯುಕ್ತವಾಗಲಿದೆ. ಎಷ್ಟೇ ಶ್ರೀಮಂತರಾದರೂ ಪರೋಪಕಾರದಿಂದ ಮಾತ್ರ ಜನಾನುರಾಗಿಯಾಗಲು ಸಾಧ್ಯವಾಗುತ್ತದೆ. ಪರೋಪಕಾರಂ ಇದಂ ಶರೀರಂ ಎಂಬ ಮಾತನ್ನು ಎಲ್ಲರೂ ಅನುಸರಿಸಬೇಕು. ಮರಿಯಪ್ಪನವರ ಕುಟುಂಬ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಕಟ್ಟಿ ಕಳೆದ 29 ವರ್ಷಗಳಿಂದಲೂ ಜನರಿಗೆ ಒಳ್ಳೆಯ ಸಂಸ್ಕಾರ ನೀಡುತ್ತಿದ್ದಾರೆ. ಅವರ ಮಕ್ಕಳು ಸಹ ಇದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.

ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ ತಿರು ಕಲ್ಯಾಣೋತ್ಸವದ ಅಂಗವಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಸುಪ್ರಭಾತ ಸೇವೆ, ಗಂಗಾಪೂಜೆ, ಅಂಕುರಾರ್ಪಣೆ, ಕಂಕಣ ಧಾರಣೆ, ಮಹಾಮಂಗಳರಾತಿ, ಪ್ರಸಾದ ವಿನಿಯೋಗ ನಡೆಯಿತು. ದೇವಾಲಯದ ನರಸೇಗೌಡ, ಮಾದೇಗೌಡ, ಮಹದೇವಣ್ಣ, ಸುಗ್ಗನಹಳ್ಳಿ ನರಸಿಂಹಮೂರ್ತಿ, ಸಿಂಗೇಗೌಡ, ಬ್ಯಾಟರಂಗೇಗೌಡ, ಕೆ.ವೆಂಕಟೇಶಯ್ಯ ಇದ್ದರು.