ಕಡತ ವಿಲೇವಾರಿಗೆ ಹಣ ಕೇಳಿದರೆ ದೂರು ಕೊಡಿ

| Published : Jan 09 2025, 12:47 AM IST

ಸಾರಾಂಶ

ಬಗರ್‌ಹುಕುಂ ಸಾಗುವಳಿದಾರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಾಗುವುದು. ನಿಮ್ಮ ಕಡತಗಳ ವಿಲೇವಾರಿಗೆ ಯಾರಿಗೂ ಹಣ ಕೊಡಬೇಡಿ ಎಂದು ಶಾಸಕ ಸಿ.ಬಿ. ಸುರೇಶ ಹಾಗೂ ತಹಸೀಲ್ದಾರ್‌ ಪುರಂದರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಬಗರ್‌ಹುಕುಂ ಸಾಗುವಳಿದಾರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಾಗುವುದು. ನಿಮ್ಮ ಕಡತಗಳ ವಿಲೇವಾರಿಗೆ ಯಾರಿಗೂ ಹಣ ಕೊಡಬೇಡಿ ಎಂದು ಶಾಸಕ ಸಿ.ಬಿ. ಸುರೇಶ ಹಾಗೂ ತಹಸೀಲ್ದಾರ್‌ ಪುರಂದರ ಹೇಳಿದರು.

ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಗರ್‌ ಹುಕುಂ ಸಾಗುವಳಿಗೆ ಮಂಜೂರಾತಿ ಕೋರಿರುವ ನಿಜವಾದ ರೈತರಿಗೆ ಹಂತ ಹಂತವಾಗಿ ಸಾಗುವಳಿ ಹಕ್ಕು ನೀಡಲಾಗುವುದು ಈ ಸಂಬಂಧ ದಲ್ಲಾಳಿಗಳು, ಮಧ್ಯವರ್ತಿಗಳು ಅಥವಾ ಸರ್ಕಾರಿ ಅಧಿಕಾರಿಗಳು ಹಣ ಕೇಳಿದರೆ ಕೂಡಲೇ ಮೇಲಾಧಿಕಾರಿಗಳ ಇಲ್ಲವೇ ಲೋಕಾಯುಕ್ತರ ಗಮನಕ್ಕೆ ತನ್ನಿ ಎಂದು ಸೂಚನೆ ನೀಡಿದರು.

ಈಗಾಗಲೆ ಡಾಕ್ಟರ್ ಬಾಬು ಜಗಜೀವನ್ ರಾಮ್ ಭವನ ನಿರ್ಮಾಣಕ್ಕಾಗಿ ಹಳೆ ಪ್ರವಾಸಿ ಮಂದಿರದ ಆವರಣದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿದ್ದು ಉಪ ವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಒಪ್ಪಿಗೆಗಾಗಿ ಈಗಾಗಲೇ ನಕಾಶೆ ಸಿದ್ಧಪಡಿಸಿ ಅನುಮೋದನೆಗೆ ಕಳಿಸಲಾಗಿದೆ ಎಂದು ತಹಶೀಲ್ದಾರ್ ಕೆ ಪುರಂದರ ಸಭೆಗೆ ತಿಳಿಸಿದರು. ತಾಲೂಕಿನಲ್ಲಿ 27 ಸಾವಿರ ಅರ್ಜಿ ಇದ್ದು 6 ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನು ವಿಲೇ ಮಾಡಲು ಕಠಿಬದ್ಧರಾಗಿದ್ದೇವೆ. ಜಮೀನು ಮಾರಬೇಕಾದರೆ ಸರ್ಕಾರದ ಅನುಮತಿ ಎಲ್ಲರಿಗೂ ಕಡ್ಡಾಯವಾಗಿದೆ ಎಂದರು

ಸಭೆಯಲ್ಲಿ ಆಶ್ರಯ ಯೋಜನೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ , ಪಡಿತರ, 15ನೇ ಹಣಕಾಸು ವರ್ಷದಲ್ಲಿನ ಹಣದ ಉಪಯೋಗ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ರಘುನಾಥ್ , ಸಿಂಗದಳ್ಳಿ ರಾಜಕುಮಾರ್, ಪುರಸಭಾ ಅಧ್ಯಕ್ಷ ಕೆಂಗಲ್ ದಯಾನಂದ್ , ತಾಪಂ ಇಒ ದೊಡ್ಡ ಸಿದ್ದಯ್ಯ ತಾಪಂ ಯೋಜನಾಧಿಕಾರಿ ಮೂರ್ತಪ್ಪ, ಗೋಡೆಕೆರೆ ವಸಂತ್ ಕುಮಾರ್, ತೀರ್ಥಪುರ ಕುಮಾರ್ ಲಿಂಗದೇವರು, ಪ್ರವೀಣ್ , ನಾಗರಾಜು, ರಾಮು, ಶಿವರಾಜ್, ಗವಿ ರಂಗಯ್ಯ, ವನಜಾಕ್ಷಮ್ಮ , ಕಾಂತರಾಜು ನಾಗಭೂಷಣ್ ಇತರರಿದ್ದರು.