ಸಾರಾಂಶ
ರಟ್ಟೀಹಳ್ಳಿ: ಇಂದಿನ ಕೆಲ ಯುವ ಸಮುದಾಯ ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಗೆ ದಾಸರಾಗಿ ಆಟ ಪಾಠಗಳಲ್ಲಿ ಪಾಲ್ಗೊಳ್ಳದೆ ಅವರ ಜೀವನದಲ್ಲಿನ ಉತ್ಸುಕತೆ ಬತ್ತಿಹೋಗುತ್ತಿದೆ ಎಂದು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕ ವಿ.ಎಮ್. ಗುರುಮಠ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಕಾಲೇಜ್ ಆವರಣದಲ್ಲಿ ಎಸ್.ಕೆ. ಹಾಕಿ ಕ್ಲಬ್ ವತಿಯಿಂದ ನಿವೃತ್ತಿ ಹೊಂದಿದ ದೈಹಿಕ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆದು ತಮ್ಮ ಜೀವನ ರೂಪಿಸಿಕೊಳ್ಳುವ ಹಂತದಲ್ಲಿ ದುಶ್ಚಟಗಳಿಗೆ ದಾಸರಾಗಿ, ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದೆ ಸಣ್ಣ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದರು.
ಮಕ್ಕಳಲ್ಲಿ ಕ್ರೀಡಾ ಮನೋಭಾವ ಕಮ್ಮಿಯಾಗುತ್ತಿದ್ದು, ಕೇವಲ ಮೊಬೈಲ್, ವಿಡಿಯೋ ಗೇಮ್, ಸಾಮಾಜಿಕ ಜಾಲ ತಾಣ, ದುಶ್ಚಟಗಳನ್ನು ಬಿಟ್ಟು ನಮ್ಮ ದೇಸಿ ಆಟಗಳಾದ ಕಬಡ್ಡಿ, ಖೋ ಖೋ, ವಾಲಿಬಾಲ್, ಹಾಕಿಗಳಂತ ಕ್ರೀಡೆಗಳಲ್ಲಿ ಪಾಲ್ಗೊಂಡರೆ ಸದೃಢ ಮನಸ್ಸಿನಲ್ಲಿ ಸದೃಢ ದೇಹ ನಿರ್ಮಾಣ ಮಾಡಲು ಸಧ್ಯ ಎಂದರು.ನನ್ನ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾಕಿ ಕ್ಲಬ್‌ನ ನನ್ನೆಲ್ಲ ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿರುವುದು ಹೃದಯ ತುಂಬಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಎಸ್.ಕೆ. ಹಾಕಿ ಕ್ಲಬ್ ಇನ್ನು ಉತ್ತರೋತ್ತರವಾಗಿ ಬೆಳೆದು ಯುವ ಸಮುದಾಯಕ್ಕೆ ದಾರಿ ದೀಪವಾಗಲಿ ಎಂದು ಶುಭ ಹಾರೈಸಿದರು.
ಉಪನ್ಯಾಸಕ ಹೆಚ್.ವಿ. ಪ್ರಕಾಶ ಮಾತನಾಡಿ, ಸರಕಾರಗಳು ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಪರಿಣಾಮ ಓಲಂಪಿಕ್ಸನಂತಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕೀರ್ತಿ ಹೆಚ್ಚುತ್ತಿದೆ ಹಾಗೂ ಹೆಚ್ಚೆಚ್ಚು ಕ್ರೀಡಾ ಕೋಟಾದಲ್ಲಿ ಸರಕಾರಿ ಕೆಲಸ ದೊರಕುತ್ತಿದ್ದು ವಿದ್ಯಾರ್ಥಿ ಜೀವನದಲ್ಲೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ ಎಂದರು.ಇದೇ ಸಂದರ್ಭದಲ್ಲಿ ವಿನಾಯಕ ಗೋವಿಂದಪ್ಪನವರ, ಮುರಳಿ ಬಾಜಿರಾಯರ, ಶಂಭು ಅಣಜಿ, ಪ್ರದೀಪ ತೋಟಗಂಟಿ, ಬಾಲಾಜಿ ಭೀಮಪ್ಪನವರ, ನಾಗರಾಜ ಸಾವಕ್ಕನವರ, ಚಂದನಾ ಚೌಟಗಿ, ರವಿ ಹದಡಿ, ಬಸಮ್ಮ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಸುರೇಶ ಅಘನಾಶಿನಿಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪ್ರಾಚಾರ್ಯ ಎನ್.ಎಂ. ಶಾಸ್ತ್ರಿ, ವಿ.ಎಸ್. ಬೆಟ್ಟಣ್ಣನವರ, ಎಂ. ಕುಬೇರಪ್ಪ, ಲಿಂಗರಾಜ ಮೂಲಿಮನಿ, ಹಾಕಿ ಕ್ಲಬ್ ಸದಸ್ಯರಾದ ಪ್ರಸನ್ನ ಅಘನಾಶಿನಿಕರ, ಸತೀಶ ಸಿ.ಎಸ್., ಗಣೇಶ ಸೊಪ್ಪಿನವರ, ಮನೋಜ ಗೋಣೆಪ್ಪನವರ, ಶಿವು ಪವಾರ, ಪ್ರವೀಣ ನಾಯಕವಾಡಿ, ನಿರಂಜನ ಕಬ್ಬಿಣಕಂತಿ ಮಠ, ಚೇತನ್ ಮಾನಪ್ಪನವರ, ಚೇತನ್ ಬೆಟ್ಟಣ್ಣನವರ, ಶಿವಕುಮಾರ, ಮಾಲತೇಶ ಪಾಟೀಲ್, ಅರುಣ ಮೂಲಿಮನಿ, ಪವನ ಚಲವಾದಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.