ಸಾರಾಂಶ
ಗುರುತತ್ವವು ಮಾರ್ಗದರ್ಶನದ ಜತೆಗೆ ಅಂತಸ್ಥ ಶಕ್ತಿಯನ್ನು ಜಾಗೃತಗೊಳಿಸುತ್ತದೆ
ಕುಮಟಾ: ಗುರು ಕೇವಲ ವ್ಯಕ್ತಿಯಲ್ಲ, ಶಕ್ತಿ. ಗುರುತತ್ವವು ಮಾರ್ಗದರ್ಶನದ ಜತೆಗೆ ಅಂತಸ್ಥ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಿ.ಎನ್. ಭಟ್ಟ ಹೇಳಿದರು.ಬಗ್ಗೋಣದಲ್ಲಿ ಸಾಧನಾ ಸಂಗೀತ ವಿದ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ, ಸಂಗೀತ ಶಿಕ್ಷಕಿ ಲಕ್ಷ್ಮೀ ಹೆಗಡೆ ಹಾಗೂ ಬಾಲಚಂದ್ರ ಹೆಗಡೆ ಅವರನ್ನು ಸನ್ಮಾನಿಸಿ ಮಾತನಾಡಿದರು.
ಗುರುವನ್ನು ನಂಬುವ ಶಿಷ್ಯನಿಗೆ ಎಂದಿಗೂ ಸೋಲಿಲ್ಲ. ಸಂಗೀತ ಕ್ಷೇತ್ರದಲ್ಲಿ ಕಳೆದ 17 ವರ್ಷಗಳಿಂದ ನಿರಂತರ ಸಾಧನೆ ಮಾಡುತ್ತಿರುವ ಲಕ್ಷ್ಮೀ ಹೆಗಡೆಯವರ ಕಾರ್ಯ ಬಹು ದೊಡ್ಡದು. ಸಾಧನಾ ಸಂಗೀತ ವಿದ್ಯಾಲಯದ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣದ ಕಾರ್ಯ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂಥದ್ದು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಗೀತಗಾರ ತಿಮ್ಮಣ್ಣ ಹೆಗಡೆ ಮಾತನಾಡಿ, ಬದುಕಿನಲ್ಲಿ ನಿತ್ಯವೂ ಸಂಗೀತವಿದೆ. ಮಾತಿನಲ್ಲೂ ಸಂಗೀತವಿದೆ. ಆದರೆ ಸಂಗೀತವನ್ನೇ ಜೀವನವಾಗಿಸಿಕೊಂಡವರು ಸಾಧಕರಾಗಿ ನಮ್ಮ ಮುಂದಿದ್ದಾರೆ ಎಂದರು.
ದೀಪಿಕಾ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿಯೂ ಗುರುವು ಜ್ಞಾನದ ಬೆಳಕನ್ನು ಹರಿಸುವವರು. ಗುರು ಶಿಷ್ಯ ಪರಂಪರೆಯನ್ನು ಎತ್ತಿ ಹಿಡಿಯಲು ಈ ಗುರುಪೂರ್ಣಿಮಾ ಕಾರ್ಯಕ್ರಮ ಎಂದರು.ಸಾಧನಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಎನ್.ಜಿ.ಹೆಗಡೆ ಕಪ್ಪೆಕೆರೆ, ಸಮರ್ಥ ಹೆಗಡೆ, ಡಾ.ಸತೀಶ ಭಟ್ಟ, ಮನೋಜ ಭಟ್ಟ ಹಾಗೂ ಇತರ ಕಲಾವಿದರು ಪಾಲ್ಗೊಂಡರು.
ಪುರಬ್ ನಾಯ್ಕ ವಂದಿಸಿದರು. ಹರ್ಷಾ ಭಟ್ಟ ಸ್ವಾಗತಿಸಿದರು. ನಂದನ ಹೆಗಡೆ, ಅನನ್ಯಾ ಭಟ್ಟ ನಿರೂಪಿಸಿದರು.