ಅಧ್ಯಯನದ ಜತೆಗೆ ಕೌಶಲ್ಯ ಬೆಳೆಸಿಕೊಂಡರೆ ಯಶಸ್ಸಿನ ದಡ ಸೇರಲು ಸಾಧ್ಯ

| Published : Apr 01 2025, 12:47 AM IST

ಸಾರಾಂಶ

ಜಗತ್ತಿನ ಜೊತೆ ಸ್ಪರ್ಧಿಸಲು ಅಧ್ಯಯನದ ಜತೆಗೆ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಯಶಸ್ಸಿನ ದಡ ಸೇರಲು ಸಾಧ್ಯ ಎಂದು ಡಾ. ಇಬ್ರಾಹಿಂಸಾಬ್ ಹೇಳಿದರು.

ಗಜೇಂದ್ರಗಡ: ಜಗತ್ತಿನ ಜೊತೆ ಸ್ಪರ್ಧಿಸಲು ಅಧ್ಯಯನದ ಜತೆಗೆ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಯಶಸ್ಸಿನ ದಡ ಸೇರಲು ಸಾಧ್ಯ ಎಂದು ಡಾ. ಇಬ್ರಾಹಿಂಸಾಬ್ ಹೇಳಿದರು.

ಪಟ್ಟಣದ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಅಡಿ ವಿದ್ಯಾರ್ಥಿಗಳಿಗಾಗಿ ಎರಡು ದಿನದ ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಜೀವನದ ಅಭಿವೃದ್ಧಿಗೆ ನಿರಂತರ ಅಧ್ಯಯನ ಒಂದು ಮೆಟ್ಟಿಲಾದರೆ, ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಸಹ ಇನ್ನೊಂದು ಮೆಟ್ಟಿಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ವ್ಯಕ್ತಿತ್ವ ವಿಕಸನವು ಬಹುಮುಖ್ಯವಾಗಿದೆ. ನಮ್ಮ ವ್ಯಕ್ತಿತ್ವವು ನಡವಳಿಕೆ ಮತ್ತು ಎಲ್ಲ ಸಂವಹನಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಮಹೇಂದ್ರ ಜಿ. ಮಾತನಾಡಿ, ನಮ್ಮ ಸಂವಹನ ಕೌಶಲ್ಯ ಹೊರತಾಗಿ, ನಮ್ಮ ವ್ಯಕ್ತಿತ್ವವು ಜೀವನದಲ್ಲಿ ಸಮಯ ನಿರ್ವಹಣಾ ಕೌಶಲ್ಯ, ತಂಡ ನಿರ್ವಹಣಾ ಹಾಗೂ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಸೇರಿ ಇತ್ಯಾದಿಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ವ್ಯಕ್ತಿತ್ವಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಮಯವನ್ನು ನಾವು ನೀಡುವುದು ಮುಖ್ಯವಾಗಿದೆ ಎಂದರು.ಐ.ಕ್ಯೂ.ಎ.ಸಿ ಸಂಚಾಲಕ ಹನುಮೇಶ, ರಾಜ್ಯದ ವಿವಿಧ ಕಾಲೇಜುಗಳಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಪಿ.ಎಚ್. ಕ್ಯಾರಕೊಪ್ಪ, ಉಮಾ ಪೂಜಾರ, ಡಾ. ಪ್ರಶಾಂತ ಅದರಕಟ್ಟಿ, ರವಿ, ಅನಿಲಕುಮಾರ, ಡಾ. ನಾಗರಾಜ ದಂಡೋತಿ, ಬಿ.ವಿ. ಮುನವಳ್ಳಿ ಹಾಗೂ ಪ್ರಾಧ್ಯಾಪಕ ಡಾ. ಎಂ. ವೈ. ಜೆಟ್ಟೆಣ್ಣನವರ್, ಪಿ.ಡಿ. ದಿವಾನದ ಸೇರಿ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ಅಜಿತಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಮಂಜುನಾಥ ಸ್ವಾಗತಿಸಿದರೆ ಜಗದೀಶ ಬೂದಿಹಾಳ ವಂದಿಸಿದರು.