ಶರಣರ ಮಾರ್ಗದಲ್ಲಿ ನಡೆದರೆ ಜನುಮ ಸಾರ್ಥಕ: ಮಾಜಿ ಸಚಿವ ಎಸ್.ಆರ್.ಪಾಟೀಲ

| Published : Nov 17 2024, 01:16 AM IST

ಶರಣರ ಮಾರ್ಗದಲ್ಲಿ ನಡೆದರೆ ಜನುಮ ಸಾರ್ಥಕ: ಮಾಜಿ ಸಚಿವ ಎಸ್.ಆರ್.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದ ಶರಣರ ಆದರ್ಶ, ನಡೆನುಡಿ ತಿಳಿದುಕೊಂಡು ಅವರ ಮಾರ್ಗದಲ್ಲಿ ನಡೆದರೆ ಬದುಕು ಪಾವನವಾಗುತ್ತದೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

12ನೇ ಶತಮಾನದ ಶರಣರ ಆದರ್ಶ, ನಡೆನುಡಿ ತಿಳಿದುಕೊಂಡು ಅವರ ಮಾರ್ಗದಲ್ಲಿ ನಡೆದರೆ ಬದುಕು ಪಾವನವಾಗುತ್ತದೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆ ಶರಣ ಸಂಗಮ ಸಮಾರಂಭ, ಶ್ರೀ ಜಗದ್ಗುರು ಗುರುಸಿದ್ದೇಶ್ವರ ವಿದ್ಯಾವರ್ಧಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಸುವರ್ಣ ಮಹೋತ್ಸವ ಮತ್ತು ಪಟ್ಟಸಾಲಿ ನೇಕಾರ ಗುರುಪೀಠದ ಶ್ರೀಗುರುಬಸವ ದೇವರ ಪಟ್ಟಾಧಿಕಾರ ಮಹೋತ್ಸವ, ಸಮಾಜಸೇವಾ ಗುರುದೀಕ್ಷಾ ಪಟ್ಟಾಭಿಷೇಕ ಮಹೋತ್ಸವದ ಶರಣರ ಅನುಭಾವ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಯಾವ ರೀತಿ ನಡೆದುಕೊಂಡರು. 900 ವರ್ಷಗಳ ಹಿಂದೆ ಅವರು ಮಾಡಿದ ಸಾಧನೆ, ಇವತ್ತಿನ ಆಧುನಿಕ ಪ್ರಪಂಚದಲ್ಲಿ ತುಲನಾತ್ಮಕವಾಗಿ ನೋಡಿದಾಗ ಬಹಳಷ್ಟು ಅಂತರ ಕಂಡುಬರುತ್ತದೆ. ಇಂದು ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣವಾಗಬೇಕು. ಶರಣರು ಹೇಳಿದಂತ ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವದ ಅಡಿಯಲ್ಲಿ ಗುರುಸಿದ್ದೇಶ್ವರ ಬ್ರಹನ್ಮಠವು ನಡೆಯುತ್ತಿದೆ. ಸಮಸಮಾಜ ನಿರ್ಮಾಣ ಮಾಡಲು ಮಾಡಿದ ಹೋರಾಟ ಇಂದಿಗೂ ಸ್ಮರಣೀಯ. ಅಂತಹ ಶರಣರ ಜೀವನ ದರ್ಶನ ಪೂಜ್ಯರ ನುಡಿಗಳ ಮುಖಾಂತರಕೇಳುವುದೇ ನಮ್ಮ ಸೌಭಾಗ್ಯ. ಶರಣರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದರು.

ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸನ್ಯಾಸಿಗಳಾಗುವುದು ಬಹಳ ಕಷ್ಟ. ಸನ್ಯಾಸಿಗಳದ್ದು ಮುಳ್ಳಿನ ಹಾಸಿಗೆ ಇದ್ದಂತೆ. ಮಕ್ಕಳನ್ನು ಐಎಎಸ್, ಎಂಜಿನಿಯರ್ ಮಾಡುವ ತಂದೆತಾಯಿಗಳಿದ್ದಾರೆ. ಆದರೆ ಮಠಕ್ಕೆ ಸ್ವಾಮೀಜಿ ಮಾಡುತ್ತೇವೆ ಎನ್ನುವ ತಂದೆ ತಾಯಿಗಳ ಕೊರತೆ ಕಾಣುತ್ತಿದೆ. ಸಮಾಜವನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಸ್ವಾಮೀಜಿಗಳಿಗಿರುತ್ತದೆ. ದೇಶದಲ್ಲಿ ಸ್ವಾಮೀಜಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂದು ಮಠಾಧಿಪತಿಗಳು ಸಿಗಬಹುದು ಆದರೆ ತತ್ವನಿಷ್ಠ ಮಠಾಧಿಪತಿಗಳು ಸಿಗುವುದಿಲ್ಲ. ಪಟ್ಟಾಧಿಕಾರ ಮಹೋತ್ಸವು ಧರ್ಮ ಮತ್ತು ಸಿದ್ದಾಂತದ ಉಪದೇಶದ ಮಾಡುವಂತಹ ಕಾರ್ಯಕ್ರಮವಾಗಿದೆ. ಗುರುಬಸವ ದೇವರು ಬುದ್ಧಿವಂತರು, ತತ್ವನಿಷ್ಠರು, ಅವರು ಪೀಠಾಧಿಪತಿಗಳಾಗುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.

ಶ್ರೀಮಠದ ಬಸವರಾಜ ಶ್ರೀಗಳು ಮಾತನಾಡಿ, ನಮ್ಮ ದೇಶ ಯಾವುದೇ ಜಾತಿ, ವರ್ಗ ಪಂಥ ಎನ್ನದೇ ಎಲ್ಲರು ಒಂದು ಎನ್ನುವ ಭಾವೈಕ್ಯತೆಯ ನೆಲೆಯಾಗಿದೆ. 12ನೇ ಶತಮಾನದ ಶರಣರು ನಾಡಿಗೆ ಉತ್ತಮ ಚಿಂತನೆ ನೀಡಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸುಸಂದರ್ಭ ಇದಾಗಿದೆ ಎಂದರು. ಹೊಳೆಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಶ್ರೀಗಳು ಮಾತನಾಡಿದರು.

ಮುರುಘಾಮಠದ ಶ್ರೀಕಾಶೀನಾಥ ಶ್ರೀಗಳು, ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು, ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ರಾಜು ಜವಳಿ, ಸಂಜಯ ಬರಗುಂಡಿ, ಸಂಗನಬಸಪ್ಪ ಚಿಂದಿ, ನಾಗೇಶ ಪಾಗಿ, ಶಿವಾನಂದ ನಾರಾ, ಸಿ.ಎಂ.ಚಿಂದಿ, ಮಲ್ಲಿಕಾರ್ಜುನ ರಾಜನಾಳ, ಈರಣ್ಣ ಶೇಖಾ ಸೇರಿದಂತೆ ಇತರರು ಇದ್ದರು.