ಸತ್ಯದ ಮಾರ್ಗದಲ್ಲಿ ನಡೆದರೆ ಸಾಧನೆ ಸಾಧ್ಯ: ಶಂಕರ ಬಿದರಿ

| Published : Dec 29 2024, 01:17 AM IST

ಸಾರಾಂಶ

ಶಿಕ್ಷಣ ಕ್ಷೇತ್ರದಲ್ಲಿ ಜಾತಿ, ಧರ್ಮ, ಪಂಥ ಬಿಟ್ಟು ಎಲ್ಲರೂ ಒಂದೇ ಎಂಬ ಮನೋಭಾವನೆ ಇಟ್ಟುಕೊಂಡಾಗ ಮಾತ್ರ ದೇಶವನ್ನು ಸುಭದ್ರವಾಗಿಸಲು ಸಾಧ್ಯ

ಬೈಲಹೊಂಗಲ: ಶಿಕ್ಷಣ ಕ್ಷೇತ್ರದಲ್ಲಿ ಜಾತಿ, ಧರ್ಮ, ಪಂಥ ಬಿಟ್ಟು ಎಲ್ಲರೂ ಒಂದೇ ಎಂಬ ಮನೋಭಾವನೆ ಇಟ್ಟುಕೊಂಡಾಗ ಮಾತ್ರ ದೇಶವನ್ನು ಸುಭದ್ರವಾಗಿಸಲು ಸಾಧ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಜಿಪಿ ಶಂಕರ ಬಿದರಿ ಹೇಳಿದರು.

ಸುಕ್ಷೇತ್ರ ಇಂಚಲದಲ್ಲಿ ಶನಿವಾರ ನಡೆದ ಶ್ರೀ ಶಿವಯೋಗೀಶ್ವರ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಉದ್ಘಾಟನೆ ಸಮಾರಂಭದ ಚಿಂತನಾಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ಶೈಕ್ಷಣಿಕ ವಂಚಿತವಾಗುವುದನ್ನು ಮನಗಂಡು ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ್ದರು. ಅದು ಇಂದು ಹೆಮ್ಮರವಾಗಿ ಬೆಳೆದು ದೇಶದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಶಿಕ್ಷಣ ಕಲಿಯುತ್ತಿರುವುದು ಇತಿಹಾಸದ ಪುಟಗಳಲ್ಲಿ ಇಂಚಲ ಗ್ರಾಮವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಿದೆ ಎಂದರು.

ಗ್ರಾಮೀಣ ಭಾಗದ ಮಕ್ಕಳಲ್ಲಿ ಶಿಕ್ಷಣ ನೀಡಿದರೆ ದೇಶ ಸುಧಾರಣೆ ಆಗಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮುಖ್ಯವಾಗಿ ಶಿಕ್ಷಣ ಅಗತ್ಯ. ಧರ್ಮ ಸತ್ಯದ ಮಾರ್ಗದಲ್ಲಿ ನಾವು ಸದಾ ನಡೆದರೆ ಸಾಧನೆ ಮಾಡಬಹುದು. ಸರ್ಕಾರ ನಂಬಿ ಯಾರೂ ಜೀವನ ಮಾಡಬೇಡಿ. ಸ್ವಾವಲಂಬಿ ಜೀವನ ನಡೆಸಿ. ನೀವು ಒಳ್ಳೆಯವರಾಗಿದ್ದರೆ ಸಾಕು ದೇಶ ತಾನಾಗಿಯೇ ಮುಂದುವರಿಯುತ್ತದೆ. ಸರ್ಕಾರದ ಸಬ್ಸಿಡಿಗೆ ಮೊರೆ ಹೋಗದೆ ಸದಾ ಕಾಯಕದಲ್ಲಿ ದೇವರನ್ನು ಕಾಣಬೇಕು. ತಂದೆ ತಾಯಿ ಮತ್ತು ಬಡವರ ಸೇವೆ ಮಾಡಿ ಎಂದು ಸಲಹೆ ನೀಡಿದರು.

ಶಿಕ್ಷಕರು ಸಂಬಳಕ್ಕಾಗಿ ಕೆಲಸ ಮಾಡದೇ ಪೂಜೆ ಅಂತಾ ಪಾಠ ಮಾಡಿ. ಮಕ್ಕಳಿಗೆ ಶಿಕ್ಷಕರು ಪೂರ್ವ ಸಿದ್ಧತೆಯಿಲ್ಲದೇ ಪಾಠ ಮಾಡಬೇಡಿ ಎಂದು ಮನವಿ ಮಾಡಿದರು. ಶ್ರೀಗಳು ನೂರಾರು ವರ್ಷ ಬಾಳಿ ಇನ್ನೂ ಅನೇಕ ಸಂಸ್ಥೆಗಳನ್ನು ಹುಟ್ಟು ಹಾಕಲೆಂದು ಹಾರೈಸಿದರು.

ಈ ವೇಳೆ ಡಾ. ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶೇಗುಣಿಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಶಾಲಾ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಗಜಾನನ ಮನ್ನಿಕೇರಿ, ಮಠಾಧೀಶರು ಗಣ್ಯಮಾನ್ಯರು ಇದ್ದರು.