ಸರಿಯಾದ ಕೋಚ್ ಸಿಕ್ಕರೆ ರಾಷ್ಟ್ರ ಮಟ್ಟಕ್ಕೆ ಬೆಳೆಯಬಹುದು

| Published : Aug 20 2024, 12:57 AM IST

ಸಾರಾಂಶ

ಕ್ರೀಡೆಗಳನ್ನು ಕಲಿಯುವ ಮಕ್ಕಳಿಗೆ ಉತ್ತಮವಾದ ಕೋಚ್‍ಗಳ ಆಗತ್ಯವಿದೆ. ಸರಿಯಾದ ಕೋಚ್ ದೊರೆತರೆ ಕ್ರೀಡಾಪಟು ರಾಷ್ಟ್ರ ಮಟ್ಟಕ್ಕೆ ಬೆಳೆಯುತ್ತಾನೆ. ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಅಂಕ ಗಳಿಸಲು ಪ್ರೇರೇಪಿಸುವ ಪೋಷಕರು ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕೆಂದು ನ್ಯಾಯವಾದಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್ ಹೇಳಿದರು.

ಕನ್ನಡಪ್ರಭವಾರ್ತೆ,ಚಿತ್ರದುರ್ಗಕ್ರೀಡೆಗಳನ್ನು ಕಲಿಯುವ ಮಕ್ಕಳಿಗೆ ಉತ್ತಮವಾದ ಕೋಚ್‍ಗಳ ಆಗತ್ಯವಿದೆ. ಸರಿಯಾದ ಕೋಚ್ ದೊರೆತರೆ ಕ್ರೀಡಾಪಟು ರಾಷ್ಟ್ರ ಮಟ್ಟಕ್ಕೆ ಬೆಳೆಯುತ್ತಾನೆ. ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಅಂಕ ಗಳಿಸಲು ಪ್ರೇರೇಪಿಸುವ ಪೋಷಕರು ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳುವಂತೆ ಉತ್ತೇಜಿಸಬೇಕೆಂದು ನ್ಯಾಯವಾದಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್ ಹೇಳಿದರು.

ನಗರದ ಓನಕೆ ಒಬವ್ವ ಕ್ರೀಡಾಂಗಣದಲ್ಲಿ ಚಿತ್ರದುರ್ಗ ಪುಟ್‍ಬಾಲ್ ಕ್ಲಬ್‍ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವ ಕಪ್ ಸ್ಫರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪುಟ್ ಬಾಲ್ ಉತ್ತಮವಾದ ಆಟವಾಗಿದ್ದು, ಪಾಲ್ಗೊಂಡವರು ಮಾನಸಿಕ ಮತ್ತು ದೈಹಿಕವಾಗಿ ಸಧೃಢವಾಗುತ್ತಾರೆ ಎಂದರು.ಕ್ರೀಡೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವಂತಹ ವಾತಾವರಣವನ್ನು ಪೋಷಕರು ಮನೆಯಲ್ಲಿ, ಶಿಕ್ಷಕರು ಶಾಲೆಯಲ್ಲಿ ನಿರ್ಮಾಣ ಮಾಡಬೇಕಿದೆ. ಇಂದಿನ ದಿನಮಾನದಲ್ಲಿ ಅಂಕ ಮತ್ತು ಆಟ ಎರಡನ್ನು ಸಮನಾಗಿ ತೂಗಿಸಿಕೊಂಡು ಹೋಗಬೇಕಿದೆ. ಕ್ರೀಡೆಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕಿದ್ದರೆ ಒಲಂಪಿಕ್‍ನಲ್ಲಿ ನಮ್ಮವರು ಮತ್ತಷ್ಟು ಪದಕಗಳನ್ನು ಗೆಲ್ಲುತ್ತಿದ್ದರು ಎಂದರು.

ಅಂತರಾಷ್ಟ್ರೀಯ ಕ್ರೀಡಾಪಟು ಎನ್.ಡಿ. ಕುಮಾರ್ ಮಾತನಾಡಿ, ಮಕ್ಕಳಿಗೆ ಸದಾ ಓದು ಎನ್ನುವ ಪೋಷಕರು ತಮ್ಮ ಮಕ್ಕಳು ಕ್ರೀಡಾಪಟುಗಳಾಗಲಿ ಎಂದು ಆಶಿಸುವುದಿಲ್ಲ. ಇದು ದೇಶದ ದುರಂತವಾಗಿದೆ. ಚೆನ್ನಾಗಿ ಓದಿ ಉತ್ತಮವಾದ ಕೆಲಸವನ್ನು ಪಡೆದು ಕೈತುಂಬ ಸಂಪಾದಿಸಲಿ ಎನ್ನುತ್ತಾರೆ. ಉದ್ಯೋಗದಲ್ಲಿ ಸರಿಯಾದ ಮೀಸಲಾತಿ ನೀಡಿದರೆ ಕ್ರೀಡೆಗೆ ಮುಂದೆ ಬರುತ್ತಾರೆ. ಈ ಬಗ್ಗೆ ಸರ್ಕಾರ ಗಮನ ನೀಡಲಿ ಎಂದರು.

ಪ್ರಾಥಮಿಕ 10, ಹೈಸ್ಕೂಲ್ 21 ಹಾಗೂ ಕಾಲೇಜಿನ 8 ತಂಡಗಳಿಂದ 450 ಕ್ರೀಡಾಪಟುಗಳು ಭಾಗವಹಿಸಿದ್ದರು. ಪ್ರಾಥಮಿಕ ವಿಭಾಗದಲ್ಲಿ ಡಾನ್ ಬಾಸ್ಕೋ ಶಾಲೆ, ಹೈಸ್ಕೂಲ್ ವಿಭಾಗದಲ್ಲಿ ಬಾಸ್ಕೋ ಬಾಲಂಜನ್ ಕಾಲೇಜು ಪ್ರಥಮ ಸ್ಥಾನವನ್ನು ಗಳಿಸಿವೆ. ಉತ್ತಮ ಕೌಶಲ್ಯ ಪ್ರದರ್ಶನ ಮಾಡಿದ ಪ್ರಜ್ವಲ್ ಹಾಗೂ ಚೇತನರವರನ್ನು ಗೌರವಿಸಲಾಯಿತು. ಅಕ್ಬರ್, ಗಿರೀಶ್, ನವಾಜ್, ಸಿದ್ದಿಕಿ, ಅಕ್ರಂ, ಆನ್ವರ್ ಉಪಸ್ಥಿತರಿದ್ದರು.