ಸಾರಾಂಶ
ರೈತರು ಉಳುಮೆ ಮಾಡುತ್ತಿರುವ ಸಾಗುವಳಿ ಜಮೀನನ್ನು ಸಾಬ್ರುಗೆ (ಮುಸ್ಲಿಂ) ಮಾಡಿಕೊಟ್ಟವರನ್ನು ನೇಣು ಹಾಕುತ್ತೇನೆ ಎಂದು ಅಧಿಕಾರಿಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರೈತರು ಉಳುಮೆ ಮಾಡುತ್ತಿರುವ ಸಾಗುವಳಿ ಜಮೀನನ್ನು ಸಾಬ್ರುಗೆ (ಮುಸ್ಲಿಂ) ಮಾಡಿಕೊಟ್ಟವರನ್ನು ನೇಣು ಹಾಕುತ್ತೇನೆ ಎಂದು ಅಧಿಕಾರಿಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.ಇತ್ತೀಚೆಗೆ ತಾಲೂಕಿನ ಮಹದೇವಪುರ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಶಾಸಕರು, ಬಹಿರಂಗವಾಗಿಯೇ ಅಧಿಕಾರಿಗಳಿಗೆ ನೇಣು ಬಿಗಿದು ಸಾಯಿಸುವ ಎಚ್ಚರಿಕೆ ನೀಡಿದ್ದಲ್ಲದೆ ಮುಸ್ಲಿಂ ಸಮುದಾಯವನ್ನು ಸಾಬ್ರು ಎಂದು ಜರಿದಿದ್ದಾರೆ.
ತಾಲೂಕಿನ ವಿವಿಧೆಡೆ ಸರ್ಕಾರಿ ಭೂಮಿಯನ್ನು ರೈತರು ಉಳುಮೆ ಮಾಡುತ್ತಿದ್ದಾರೆ. ಬಗರ್ ಹುಕುಂ (ದರಕಾಸ್ತು) ಯೋಜನೆಯಲ್ಲಿ ಮಾಲೀಕತ್ವಕ್ಕಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಸದರಿ ಭೂಮಿಯನ್ನು ಮುಸ್ಲಿಂ ಸಮುದಾಯದವರಿಗೆ, ಅವರ ವಿವಿಧ ಉದ್ದೇಶಗಳಿಗೆ ಕಂದಾಯ ಅಧಿಕಾರಿಗಳು ಅಕ್ರಮ ಖಾತೆ ಮಾಡುತ್ತಿದ್ದಾರೆ ಎಂದು ರೈತರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಶಾಸಕರು ಗರಂ ಆಗಿ ಮಾತನಾಡಿದ್ದಾರೆ.ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ಅಕ್ರಮ ಚಟುವಟಿಕೆ ಜಾಸ್ತಿಯಾಗಿರುವ ಕುರಿತು ಎಚ್ಚರಿಕೆ ನೀಡಿದ್ದು, ಉಳಿದು ಕೊಂಡರೆ ಸರ್ಕಾರಕ್ಕೆ ಉಳಿದು ಕೊಳ್ಳಲಿ. ಒಂದು ವೇಳೆ ಸಾಬ್ರು ಹೆಸರಿಗೆ ಮಾಡುತ್ತಾನೋ ಅವನನ್ನು ನೇಣು ಹಾಕುವುದು ಗ್ಯಾರಂಟಿ. ಇಷ್ಟು ಜನರ ಮುಂದೆ ಹೇಳಿದ್ದೀನಿ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಶಾಸಕರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.