30 ರಿಂದ 40 ವರ್ಷಗಳ ಹಿಂದೆ ಸಾಗುವಳಿ ಮಂಜುರಾಗಿ ಎಲ್ಲಾ ದಾಖಲೆಗಳು ರೈತರ ಬಳಿ ಇದ್ದರೂ ಸಹ ತಾಲೂಕು ಕಚೇರಿಗೆ ಅರ್ಜಿ ಹಾಕಿದಾಗ ಕಡತಗಳು ಲಭ್ಯವಿಲ್ಲ ಎಂದು ಮಾಹಿತಿ ನೀಡುತ್ತಾರೆ.

ಕನ್ನಡಪ್ರಭ ವಾರ್ತೆ ಹೊಸಕೋಟೆಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರು ಪೋಡಿ ಮಾಡಿಸಿಕೊಳ್ಳಲು ತಾಲೂಕು ಕಚೇರಿಯಲ್ಲಿ ಸಾಗುವಳಿ ಕಡತಕ್ಕೆ ಅರ್ಜಿ ಹಾಕಿದರೆ ಕಡತ ಲಭ್ಯವಿಲ್ಲ ಎಂದು ಅಧಿಕಾರಿಗಳು ಉತ್ತರ ಕೊಡುತ್ತಾರೆ. ಅದರೆ ಅಧಿಕಾರಿಗಳಿಗೆ ದಕ್ಷಿಣೆ ಕೊಟ್ಟರೆ ಕಡತವನ್ನು ಕೊಡುತ್ತಾರೆ ಇದರಿಂದ ಒಂದೆರಡು ಎಕರೆ ಭೂಮಿ ಹೊಂದಿರುವಂತಹ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ವಿಧಾನ ಪರಿಷತ್‌ನಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತಂದರು.ಸಾಗುವಳಿ ಜಮೀನಿಗೆ ಪೋಡಿ ಮಾಡಿಕೊಡಲು ಸಾಗುವಳಿ ವಿತರಣಾ ಪುಸ್ತಕ, ಓಎಂ ರಿಜಿಸ್ಟರ್, ಮ್ಯುಟೆಷನ್‌, ಸರ್ಕಾರದ 5 ದಾಖಲೆಗಳಲ್ಲಿ ಯಾವುದಾದರೂ ಮೂರು ಇದ್ದರೆ ಸಾಕು ಪೋಡಿ ಮಾಡಬಹುದು ಎಂಬ ಕಾನೂನನ್ನು ರೂಪಿಸಲಾಗಿದೆ. ಆದರೆ 30 ರಿಂದ 40 ವರ್ಷಗಳ ಹಿಂದೆ ಸಾಗುವಳಿ ಮಂಜುರಾಗಿ ಎಲ್ಲಾ ದಾಖಲೆಗಳು ರೈತರ ಬಳಿ ಇದ್ದರೂ ಸಹ ತಾಲೂಕು ಕಚೇರಿಗೆ ಅರ್ಜಿ ಹಾಕಿದಾಗ ಕಡತಗಳು ಲಭ್ಯವಿಲ್ಲ ಎಂದು ಮಾಹಿತಿ ನೀಡುತ್ತಾರೆ.

ಅವರಿಗೆ ದಕ್ಷಿಣೆ ಏನಾದ್ರೂ ಕೊಟ್ರೆ ಎಲ್ಲ ದಾಖಲಾತಿ ಕೊಡ್ತಾರೆ. ಏನು ಕೊಡಲಿಲ್ಲ ಅಂದ್ರೆ ಬರಿಗೈಯಲ್ಲಿ ರೈತರು ವಾಪಸ್ ಬರುವಂತಾಗಿದೆ. ಎಲ್ಲಾ ತಾಲೂಕು ಕಚೇರಿಯಲ್ಲಿ ಈ ರೀತಿ ನಡೆಯಬಹುದು. ಆದರೆ, ಹೊಸಕೋಟೆ ತಾಲೂಕು ಕಚೇರಿಯಲ್ಲಿ ಯಥೇಚ್ಛವಾಗಿ ನಡೆಯುತ್ತಿದೆ. ರಾಜಕೀಯ ಬಲ, ತೋಳ್ಬಲ, ಹಣಬಲ ಇರುವವರು ಯಾವುದಾದರೂ ರೀತಿಯಲ್ಲಿ ಕೆಲಸ ಮಾಡಿಸಿಕೊಂಡು ಬರುತ್ತಿದ್ದಾರೆ. ಆದರೆ ಒಂದೆರಡು ಎಕರೆ ಭೂಮಿ ಇರುವ ಬಡವರಿಗೆ ಯಾವುದೇ ರೀತಿಯ ಕೆಲಸ ಆಗದೆ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದರು.ಸರ್ವೆಗೆ ನೋಟಿಸ್ ಕೊಡೊಲ್ಲ:

ದರಖಾಸ್ತು ಪೋಡಿ ದುರಸ್ತಿಗೆ ಬರುವ ಸರ್ವೆಯರ್‌ಗಳು ಅಕ್ಕ ಪಕ್ಕದ ಜಮೀನಿನ ಮಾಲೀಕರಿಗೆ ನೋಟಿಸ್ಸೆ ಕೊಡುವುದಿಲ್ಲ. ಯಾವಾಗಲೋ ಬಂದು ಇವ್ರು ಸರ್ವೆ ಮಾಡಿಕೊಂಡು ಹೋಗ್ತಾರೆ. ಸ್ಕೆಚ್ ಮಾಡಿದ ಮೇಲೆ ಸ್ವಾಧೀನ ಓವರ್ ಲ್ಯಾಪ್ ಆಗುತ್ತದೆ. ಆಗ ಅಕ್ಕ ಪಕ್ಕದ ಜಮೀನಿನವರಿಗೆ ಜಗಳಗಳು ಉಂಟಾಗುತ್ತದೆ. ಸಾಗುವಳಿದಾರರು ಸ್ವಾಧೀನದಲ್ಲಿರುವ ಜಮೀನು ಒಂದು ಕಡೆಯಾದರೆ, ಇವರು ಸರ್ವೆ ಮಾಡುವುದೇ ಒಂದು ಕಡೆ, ಅವರಿಗೆ ಸ್ವಾದಿನ ಅನುಭವ ತೋರಿಸುವುದು ಬೇರೆ ಕಡೆ ರೈತರಿಗೆ ಜಗಳ ಉಂಟಾಗಿ ಪೊಲೀಸ್ ಠಾಣೆಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಉಳಿದಂತೆ ಸ್ವಾದಿನ ಅನುಭವದಲ್ಲಿದ್ದು ಪೋಡಿಗೆ ಅರ್ಜಿ ಹಾಕಿದ ರೈತನಿಗೆ ಪೋಡಿ ಆಗುವುದಿಲ್ಲ ಬದಲಾಗಿ ಹಳೆಯ ದಿನಾಂಕದಲ್ಲಿ ಸಾಗುವಳಿ ಮಂಜುರಾದಂತೆ ಕಡತಗಳಲ್ಲಿ ಹೆಸರನ್ನು ಸೇರಿಸಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಬರುವವರಿಗೆ ಪೋಡಿಯಾಗುತ್ತಿದೆ. ಆದ್ದರಿಂದ ಕಂದಾಯ ಸಚಿವರು ಇದನ್ನ ಗಮನಕ್ಕೆ ತೆಗೆದುಕೊಂಡು ಪ್ರತಿ ನಿತ್ಯ ತಾಲೂಕು ಕಚೇರಿಗೆ ಅಲೆದಾಡುವ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಫೊಟೋ:13 ಹೆಚ್‌ಎಸ್‌ಕೆ 1ಎಂಎಲ್ಸಿ ಎಂಟಿಬಿ ನಾಗರಾಜ್ ಭಾವಚಿತ್ರ