ಸಾರಾಂಶ
ಗುತ್ತಲ: ಮನುಷ್ಯನ ಜೀವನದಲ್ಲಿ ವಿಶಾಲವಾದ ಮನಸ್ಥಿತಿಯನ್ನು ಹೊಂದಿದರೆ ಏನನ್ನಾದರೂ ಸಾಧಿಸಬಹುದು ಹಾಗೂ ಎಂತಹ ಕಠಿಣ ಪರಿಸ್ಥಿತಿಯನ್ನಾದರು ಎದುರಿಸಬಹುದು ಎಂದು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಪಟ್ಟಣದ ಲಿಂ. ಸಂಗನಬಸವ ಮಹಾಸ್ವಾಮಿಗಳ ೬ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು ಗುತ್ತಲ ಕಲ್ಮಠ, ಅಗಡಿ ಪ್ರಭುಸ್ವಾಮಿಮಠದ ಅಭಿವೃದ್ಧಿಗೆ ಲಿಂ.ಸಂಗನಬಸವ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯವಾದುದು, ಕಲ್ಮಠ, ಶಾಲೆ, ಕಲ್ಯಾಣ ಮಂಟಪ ಕಟ್ಟಿಸಿ ಸಮಾಜಮುಖಿ ಕಾರ್ಯಗಳಿಂದ ಸಂಗನಬಸವ ಶ್ರೀಗಳು ಶರೀರದಿಂದ ಮಾತ್ರ ದೂರವಾಗಿದ್ದು, ಭಕ್ತರಲ್ಲಿ ಅಜರಾಮರವಾಗಿದ್ದಾರೆ. ಸಂಗನಬಸವ ಶ್ರೀಗಳ ಕಾಯಕದ ಹಿಂದೆ ಅವರ ತ್ರಿಕಾಲ ಲಿಂಗಪೂಜಾ ನಿಷ್ಠೆಯ ಅಗಾಧ ಶಕ್ತಿ ಸಾಗರವನ್ನೆ ಹೊಂದಿದ್ದರು. ಸಮಾಜದ ಏಳಗಿಗೆ ಶ್ರೀಗಳು ನೀಡಿರುವ ಕೊಡುಗೆಯನ್ನು ನೋಡಿದರೆ ಅವರಲ್ಲಿರುವ ಸಮಾಜದ ಕಾಳಜಿಯನ್ನು ಎತ್ತಿ ತೋರುತ್ತದೆ. ಲಿಂ.ಸಂಗನಬಸವ ಸ್ವಾಮೀಜಿ ಸಮಾಜದ ಅಭಿವೃದ್ಧಿಗೆ ಉತ್ತಮ ವಿಚಾರ ಹಾಗೂ ಕಾರ್ಯಗಳನ್ನು ಮಾಡುವ ಮೂಲಕ ಈ ಭಾಗದ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಮಹಾತ್ಮರಲ್ಲಿ ಒಬ್ಬರು ಎಂದರು.
ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಸ್ವಾಮಿಜಿ ಮಾತನಾಡಿ, ಲಿಂಗಪೂಜಾ ನಿಷ್ಠರು, ಸರಳತೆಯ ಮಾತೃ ಹೃದಯಿ ಲಿಂ.ಸಂಗನಬಸವ ಶ್ರೀಗಳು ಸ್ಮರಣೋತ್ಸವದಲ್ಲಿ ಅವರು ಸಮಾಜಕ್ಕಾಗಿ ಮಾಡಿರುವ ಕಾರ್ಯಗಳನ್ನು ನೆನೆಯುವುದೆ ನಮ್ಮಗಳ ಭಾಗ್ಯವಾಗಿದೆ. ಭಕ್ತರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಕಾರ್ಯವನ್ನು ಮಾಡಿದ್ದರು. ಭಕ್ತ ಸಮೂಹಕ್ಕೆ ಸಂಸ್ಕೃತಿ ಹಾಗೂ ಉತ್ತಮ ವಿಚಾರಗಳನ್ನು ನೀಡುತ್ತಾ ತಮ್ಮ ಕಾಯಕವನ್ನು ನಡೆಸಿಕೊಂಡು ಬಂದಿದ್ದರು. ಅಂತಹ ಮಹಾತ್ಮರ ಶಿಷ್ಯರಾಗಿ ಇಂದಿನ ಕಲ್ಮಠ ಹಾಗೂ ಅಗಡಿ ಮಠಗಳ ಪೀಠಾಧಿಪತಿಯಾಗಿರುವ ಗುರುಸಿದ್ಧ ಸ್ವಾಮೀಜಿಯು ತಮ್ಮ ಗುರುವಿನ ಮಾರ್ಗದಲ್ಲಿ ನಡೆದು ಅವರುಗಳ ರೀತಿಯಲ್ಲಿಯೇ ಮಠವನ್ನು ಅಭಿವೃದ್ಧಿ ಮಾಡುವ ಜೊತೆಗೆ ಸಮಾಜದ ಬಗ್ಗೆ ಕಾಳಜಿ ಹೊಂದಿದವರಾಗಿದ್ದಾರೆ. ಸಮಾಜದಲ್ಲಿ ತನು, ಮನ, ಶುದ್ಧ ಭಾವವನ್ನು ಅರ್ಪಣೆ ಮಾಡಿದರೆ ಚಿರಕಾಲ ವ್ಯಕ್ತಿಯ ಮನೆ ಮನದಲ್ಲಿ ಉಳಿಯುವಂತಾಗುತ್ತಾರೆ ಅಂತಹ ಮಹತ್ತರ ಕಾರ್ಯವನ್ನು ಲಿಂಗೈಕೈ ಸಂಗನಬಸವ ಸ್ವಾಮೀಜಿ ಮಾಡಿದ್ದಾರೆ ಎಂದರು.ಸಾನಿಧ್ಯ ವಹಿಸಿದ್ದ ಗೋಲಗೇರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ, ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಗುಡ್ಡದಆನ್ವೇರಿ ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಸವಣೂರ ದೊಡ್ಡಹುಣಸೆಮಠದ ಶ್ರೀ ಚನ್ನಬಸವ ಸ್ವಾಮೀಜಿ, ರಾಣೇಬೆನ್ನೂರ ಪುಟ್ಟಯ್ಯಮಠದ ಶ್ರೀ ಗುರುಬಸವ ಸ್ವಾಮೀಜಿ, ಕೃಷ್ಣಾಪುರದ ಬಾಲತಪಸ್ವಿ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ, ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದಲ್ಲಿ ಲಿಂ. ಶ್ರೀ ಸಂಗನಬಸವ ಪ್ರಶಸ್ತಿಗೆ ಭಾಜನರಾದ ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಸ್ವಾಮೀಜಿ, ವೀರಾಪುರ ಆಸ್ಪತ್ರೆಯ ಡಾ. ಬಸವರಾಜ ವೀರಾಪುರ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಚನ್ನಪ್ಪ ಕಲಾಲ, ಕೃಷಿ ಕ್ಷೇತ್ರದಲ್ಲಿ ಅಜ್ಜಪ್ಪ ತರ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಚಿನ್ಮಯ ಕುಲಕರ್ಣಿ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಪುಷ್ಪಾ ಶಲವಡಿಮಠ, ಸಾಹಿತ್ಯ ಕ್ಷೇತ್ರದಲ್ಲಿ ನೀಲಕಂಠಯ್ಯ ಓದಿಸೋಮಠ ಹಾಗೂ ಸಂಗೀತ ಕ್ಷೇತ್ರದಲ್ಲಿ ಹೇಮಂತ ತಳವಾರ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಕಿರಣಕುಮಾರ ಬಾಲಾಜಿ, ಪ.ಪಂ. ಮಾಜಿ ಉಪಾಧ್ಯಕ್ಷ ನಾಗರಾಜ ಏರಿಮನಿ, ಮಾಜಿ ಸದಸ್ಯ ರಮೇಶ ಮಠದ, ಶಂಭಣ್ಣ ಬಸಗೇಣ್ಣಿ, ಅಜ್ಜಪ್ಪ ಆರೇಮಲ್ಲಾಪುರ, ಕೃಷ್ಣ ಚಕ್ರಸಾಲಿ, ಮಾಲತೇಶ ಬನ್ನಿಮಟ್ಟಿ, ಶಿವಾನಂದ ನಂದಿಗೊಣ್ಣ, ಮಂಜುನಾಥ ವಟ್ನಳ್ಳಿ, ಪ್ರಕಾಶ ಬಾರ್ಕಿ, ಶಂಕ್ರಪ್ಪ ಚಂದಾಪುರ, ವೀರಯ್ಯ ಪ್ರಸಾಧಿಮಠ, ಮಾರುತಿ ಕೋಡಬಾಳ, ಪ್ರಕಾಶ ಸೊಪ್ಪಿನ, ಮಂಜುಳಾ ಕೊಪ್ಪದ, ಕಸಾಪ ಹೋಬಳಿ ಘಟಕದ ಪದಾಧಿಕಾರಿಗಳು, ಸಂಗನಬಸವ ವಿದ್ಯಾನಿಕೇತನ ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಗುತ್ತಲ, ಅಗಡಿ ಸೇರಿದಂತೆ ವಿವಿಧ ಹಳ್ಳಿಗಳ ಭಕ್ತರು ಸೇರಿದಂತೆ ಅನೇಕರಿದ್ದರು.