ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕನ್ನಡ ಮತ್ತು ಸಂಸ್ಕೃತಿ ಸಚಿವ ಸಚಿವ ಶಿವರಾಜ್ ತಂಗಡಗಿ, ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿರುವುದು ಖಂಡನೀಯ. ಕಪಾಳಕ್ಕೆ ಹೊಡೆಯುವುದು ದೂರದ ಮಾತು, ಅವರಿಗೆ ತಾಕತ್ತಿದ್ದರೆ ಮೋದಿ ಮೋದಿ ಎನ್ನುವ ಕೋಟ್ಯಂತರ ಮೋದಿ ಅಭಿಮಾನಿಗಳನ್ನು ಮುಟ್ಟಿ ನೋಡಲಿ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಸವಾಲು ಹಾಕಿದ್ದಾರೆ.
ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ದಿನೇದಿನೆ ಹೆಚ್ಚುತ್ತಿರುವ ಮೋದಿಯವರ ಜನಪ್ರಿಯತೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿನ ದುಸ್ಥಿತಿ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತಾಗಿದೆ. ಸೋನಿಯಾ ಗಾಂಧಿ, ಮೋದಿಯವರನ್ನು ಸಾವಿನ ವ್ಯಾಪಾರಿ ಎಂದಿದ್ದರು, ಖರ್ಗೆ ಮೋದಿಯವರನ್ನು ವಿಷ ಸರ್ಪ ಎಂದಿದ್ದರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೂ ಏಕವಚನದಲ್ಲೇ ಮಾತನಾಡುತ್ತಾರೆ, ಅದರ ಮುಂದುವರಿದ ಭಾಗವಾಗಿ ಈಗ ಶಿವರಾಜ್ ತಂಗಡಗಿ ಮಾತನಾಡಿದ್ದಾರೆ ಎಂದವರು ಆರೋಪಿಸಿದರು.ಮೋದಿ ಆಡಳಿತದಲ್ಲಿ ದೇಶದ ನಿರುದ್ಯೋಗದ ಪ್ರಮಾಣ ಶೇ.4.7ರಷ್ಟು ಇಳಿದಿದೆ, ಆರ್ಥಿಕತೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿದ್ದು, ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಿವೆ, ಯುವಕರು ನೂರಾರು ಸ್ಟಾರ್ಟ್ ಅಪ್‌ಗಳನ್ನು ಪ್ರಾರಂಭಿಸಿದ್ದಾರೆ. ಅದಕ್ಕಾಗಿಯೇ ಯುವಜನತೆ ಮೋದಿ ಮೋದಿ ಎನ್ನುತ್ತಿದ್ದಾರೆ ಎಂದವರು ಪ್ರತಿಪಾದಿಸಿದರು.ರಾಜ್ಯದಲ್ಲಿ 2022-23ರಲ್ಲಿ 5.20 ಲಕ್ಷ ಯುವಕರು ಪದವಿ ಪಡೆದಿದ್ದಾರೆ, ಆದರೆ ಕಾಂಗ್ರೆಸ್ ಸರ್ಕಾರ ಯುವ ನಿಧಿ ಯೋಜನೆಯಡಿ ಕೇವಲ 3,500 ಯುವಕರಿಗೆ ಮಾತ್ರ ಭತ್ಯೆ ನೀಡಿದೆ. ಸರ್ಕಾರ ಯುವಕರಿಗೆ ಸುಳ್ಳು ಹೇಳಿ ಮೋಸ ಮಾಡಿದೆ ಎಂದರು.ಇತ್ತೀಚೆಗೆ ಕಾಂಗ್ರೆಸ್ಸಿನ ಮುಖ್ಯ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರು ಕಂಗನಾ ರಣಾವತ್ ಅವರ ಚಿತ್ರದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದರು. ಕಾಂಗ್ರೆಸ್ ಹೆಣ್ಣು ಮಕ್ಕಳ ಬಗ್ಗೆ ಬಳಸುವ ಕೀಳು ಮಟ್ಟದ ಬಾಷೆಯನ್ನು ಈ ಪೋಸ್ಟ್ ತೋರಿಸುತ್ತದೆ ಎಂದು ಮುಟ್ಲುಪಾಡಿ ಆರೋಪಿಸಿದರು.
ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ವಕ್ತಾರ ವಿಜಯಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಕಚೇರಿ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.