ಸಾರಾಂಶ
ಹನೂರು ಪಟ್ಟಣದಲ್ಲಿ ವಿಶ್ವ ಮಲೇರಿಯಾ ನಿಯಂತ್ರಣ ಅಂಗವಾಗಿ ಮಲೇರಿಯಾ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಹನೂರು
ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದಲ್ಲಿ ಎಲ್ಲ ಜ್ವರದ ಪ್ರಕರಣಗಳನ್ನು ಮಲೇರಿಯಾ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಯಾವುದೇ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ರಾಜೇಶ್ ತಿಳಿಸಿದರು.ಪಟ್ಟಣದ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಿಂದ ಅಂಬೇಡ್ಕರ್ ವೃತ್ತ, ಖಾಸಗಿ ಬಸ್ ನಿಲ್ದಾಣ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅರಿವು ಜಾಥಾ ಕಾರ್ಯಕ್ರಮದ ನಂತರ ಮಾತನಾಡಿದರು.ಶಿಶುಗಳು ಮತ್ತು ಗರ್ಭಿಣಿಯರಿಗೆ ಮಲೇರಿಯಾ ರೋಗವು ಅಪಾಯಕಾರಿಯಾಗಿದ್ದು, ಅಂತಹವರು ಯಾವುದೇ ಜ್ವರವಿರಲಿ ತಡಮಾಡದೆ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಹಾಗಾಗಿ ನೀರು ಶೇಖರಣಾ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಯಾವಾಗಲೂ ಮುಚ್ಚಿರಬೇಕು, ವಾರಕ್ಕೊಮ್ಮೆ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿಮಾಡಿಕೊಳ್ಳಿ, ರೋಗವಾಹಕ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯು ಕೈಗೊಳ್ಳುವ ಕೀಟನಾಶಕ ಸಿಂಪಡಣಾ ಕಾರ್ಯಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ಮುಖಂಡರು, ಸದಸ್ಯರಗಳ ಸಹಕಾರ ನೀಡಿದರೆ ಮಲೇರಿಯಾ ತಡೆಗಟ್ಟಲು ಸಾಧ್ಯ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ಮಾತನಾಡಿ, ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹಾಗೂ ಇತರೆ ಹೊಂಡಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು ನೀರು ನಿಂತರೆ ಅದರಲ್ಲಿ ಸೊಳ್ಳೆಗಳು ಕುಳಿತು ರೋಗ ರೋಜಿನೆಗಳ ಆವಾಸಸ್ಥಾನವಾಗಿ ಕಂಡು ಬರುತ್ತದೆ ಅಂತಹ ಸ್ಥಳದಲ್ಲಿ ನಾಗರಿಕರು ಸ್ವಚ್ಛತೆಯಿಂದ ಪರಿಸರವನ್ನು ಉತ್ತಮಪಡಿಸಿ ಮುಂದಾಗಬೇಕು ನಾಗರಿಕರು ರೋಗದಿಂದ ದೂರಾಗಲು ಕ್ರಮವಹಿಸುವಂತೆ ತಿಳಿಸಿದರು. ಇದೇ ವೇಳೆ ತಹಸೀಲ್ದಾರ್ ಗುರುಪ್ರಸಾದ್, ಇಒ ಉಮೇಶ್, ವೈದ್ಯರಾದ ಪುಷ್ಪರಾಣಿ, ಉಲ್ಲಾಸ್, ಜಾಹ್ನವಿ, ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.