‘ಬಿಜೆಪಿ ಕಚೇರಿಗೆ ಒಮ್ಮೆ ಬಂದು ನೋಡಲಿ..’ಕಾಂಗ್ರೆಸಿಗರಿಗೆ ಸವಾಲು ಹಾಕಿದ ಶಾಸಕ

| Published : Aug 24 2024, 01:19 AM IST

‘ಬಿಜೆಪಿ ಕಚೇರಿಗೆ ಒಮ್ಮೆ ಬಂದು ನೋಡಲಿ..’ಕಾಂಗ್ರೆಸಿಗರಿಗೆ ಸವಾಲು ಹಾಕಿದ ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಐವನ್ ಡಿಸೋಜಾ ಓರ್ವ ಭಯೋತ್ಪಾದಕ. ತಾಕತ್ತಿದ್ದರೆ ನನ್ನ ಮೇಲೆ ರೌಡಿಶೀಟರ್ ಹಾಕಲಿ ನೋಡೋಣ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದಿದ್ದವರು ನೀವು. ನಿಮ್ಮಂತಹವರ ಗೊಡ್ಡು ಬೆದರಿಕೆಗಳಿಗೆಲ್ಲ ಭಾರತ್ ಮಾತಾ ಕಿ ಜೈ ಎನ್ನುವ ದೇಶಭಕ್ತ ಬಿಜೆಪಿ ಪಡೆ ಹೆದರುವ ಪ್ರಶ್ನೆಯೇ ಇಲ್ಲ, ತಾಕತ್ತಿದ್ದರೆ ಬನ್ನಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್‌ಗೆ ಸವಾಲು ಹಾಕಿದರು.

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ ಅವರ ಮನೆಯಿಂದ ಜಿಲ್ಲಾ ಬಿಜೆಪಿ ಕಚೇರಿವರೆಗೆ ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್‌ ಮುಖಂಡರು ಘೋಷಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆಯೇ ಪಿವಿಎಸ್ ಕಚೇರಿ ಬಳಿ ಬಿಜೆಪಿ ಶಾಸಕರುಗಳು, ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್‌ ಕಾಮತ್, ಬಿಜೆಪಿ ಕಚೇರಿಗೆ ನುಗ್ಗುವುದೆಂದರೆ ಸಾರ್ವಜನಿಕರ ಬಸ್‌ಗೆ ಕಲ್ಲು ಹೊಡೆದಷ್ಟು, ನಿರ್ಜೀವ ಟಯರಿಗೆ ಬೆಂಕಿ ಹಚ್ಚಿದಷ್ಟು ಸುಲಭವಲ್ಲ. ಬೇಕಿದ್ದರೆ ಒಮ್ಮೆ ಬಂದು ಪ್ರಯತ್ನಿಸಿ ನೋಡಲಿ, ವಿಶೇಷ ಚಪ್ಪಲಿಯ ಹಾರಗಳು ಅವರಿಗಾಗಿ ಸಿದ್ಧವಾಗಿವೆ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯಗೆ ಬಿರ್ಯಾನಿ ಕೊಟ್ಟು ಐವನ್ ಶಾಸಕರಾಗಿದ್ದಾರೆ. ಐವನ್ ಓರ್ವ ಬಕೆಟ್, ಬಕೆಟ್ ಅಷ್ಟೇ ಅಲ್ಲ ದೊಡ್ಡ ಸಿಂಟೆಕ್ಸ್. ಐವನ್ ಡಿಸೋಜಾ ನಿಮಗೆ ತಾಕತ್ತಿದ್ದರೆ ಕಾರ್ಯಕರ್ತರನ್ನು ಇಲ್ಲಿಗೆ ಕಳುಹಿಸಿ ಎಂದು ಅವರು ಸವಾಲು ಹಾಕಿದರು.

ತಾಕತ್ತಿದ್ದರೆ ರೌಡಿಶೀಟ್‌ ಹಾಕುವಂತೆ ಶಾಸಕ ಸವಾಲು

ಐವನ್ ಡಿಸೋಜಾ ಓರ್ವ ಭಯೋತ್ಪಾದಕ. ತಾಕತ್ತಿದ್ದರೆ ನನ್ನ ಮೇಲೆ ರೌಡಿಶೀಟರ್ ಹಾಕಲಿ ನೋಡೋಣ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸವಾಲು ಹಾಕಿದ್ದಾರೆ.ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ತಾಕತ್ತಿದ್ದರೆ ನನ್ನ ಮೇಲೆ ರೌಡಿಶೀಟ್ ತೆರೆಯಲಿ. ಕಾಂಗ್ರೆಸ್ ತಪ್ಪನ್ನು ತೋರಿಸಿದವರಿಗೆ ರೌಡಿಶೀಟರ್ ತೆರೆಯೋದು ಅವರ ಜಾಯಮಾನ. ಅಂತಹ ದೇಶದ್ರೋಹಿಗಳ ವಿರುದ್ಧ ಧ್ವನಿಯೆತ್ತಿದರೆ ರೌಡಿಶೀಟರ್ ಕೇಸ್ ಹಾಕುವುದು ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಇದೆ. ಇದಕ್ಕೆಲ್ಲ ನಾವು ಹೆದರಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶದ್ರೋಹದ ಹೇಳಿಕೆ ನೀಡಿದ್ದನ್ನು ವಿರೋಧಿಸುವವರ ಮೇಲೆ ರೌಡಿಶೀಟರ್ ಹಾಕುತ್ತೀರಿ ಎಂದಾದರೆ ರಾಜ್ಯಪಾಲರ ವಿರುದ್ಧ ಮಾತನಾಡಿದ, ರಾಜಭವನದ ಮೇಲೆ ಬಾಂಗ್ಲಾ ಮಾದರಿ ಉಗ್ರದಾಳಿ ನಡೆಸುವ ಬೆದರಿಕೆ ಹಾಕಿದ ಐವನ್ ಡಿಸೋಜಾ ಮೇಲೆ ಯಾವ ಶೀಟರ್ ಹಾಕಬೇಕು? ಅವರ ಮೇಲೆ ರೌಡಿ ಶೀಟರ್ ಅಲ್ಲ, ಐವನ್ ಓರ್ವ ಭಯೋತ್ಪಾದಕ ಎಂದೇ ಹೇಳಬೇಕು. ಭಯೋತ್ಪಾದಕರು ಬಾಂಗ್ಲಾದಿಂದ ನುಸುಳಿ ಬಂದು ಇಲ್ಲಿ ಇರ್ತಾರೆ. ಹಾಗಾಗಿ ವೇದವ್ಯಾಸ ಕಾಮತ್ ರೌಡಿಶೀಟರ್ ಆದರೆ ಐವನ್ ಡಿಸೋಜಾ ಭಯೋತ್ಪಾದಕ. ಭಯೋತ್ಪಾದಕ ಐವನ್ ಡಿಸೋಜಾರಿಂದ ಬಿಜೆಪಿ ಕಲಿತುಕೊಳ್ಳುವಂತದ್ದು ಏನೂ ಇಲ್ಲ ಎಂದು ವೇದವ್ಯಾಸ್‌ ಕಾಮತ್‌ ತಿರುಗೇಟು ನೀಡಿದರು.

---------------