ಸಾರಾಂಶ
ರಾಣಿಬೆನ್ನೂರು: ಸಾಲ ವಸೂಲಾತಿಗಾಗಿ ಸಾಲಗಾರರ ಮನೆ ಬಾಗಿಲಿಗೆ ತೆರಳಿದ್ದ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಖಾಸಗಿ ಟಿವಿ ಚಾನೆಲ್ ಕ್ಯಾಮೆರಾ ಕಂಡು ಕಳ್ಳರಂತೆ ಮುಖ ಮುಚ್ಚಿಕೊಂಡು ಓಡಿ ಹೋದ ಘಟನೆ ಗುರುವಾರ ನಗರದಲ್ಲಿ ಜರುಗಿದೆ. ಇಲ್ಲಿನ ಸಿದ್ಧೇಶ್ವರ ನಗರದಲ್ಲಿ ಹೋಟೆಲ್ ನಡೆಸುತ್ತಿರುವ ಸೂರಜ್ ಕುಟುಂಬದವರು ಹೊಟೇಲ್ ಹಾಗೂ ಮನೆ ಹಿರಿಯರ ಅನಾರೋಗ್ಯದ ನಿಮಿತ್ತ ಸುಮಾರು 2.5 ಲಕ್ಷ ರು. ಸಾಲ ಪಡೆದಿದ್ದರು. ತಮ್ಮ ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ತಿಂಗಳು ಹಣ ತುಂಬುವುದು ಸಾಧ್ಯವಾಗುತ್ತಿಲ್ಲ,ಸ ಮುಂದಿನ ತಿಂಗಳು ಕಂತು ಕಟ್ಟುವುದಾಗಿ ಮನೆಯವರು ಪರಿಪರಿಯಾಗಿ ಬೇಡಿಕೊಂಡರೂ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಕೇಳಿರಲಿಲ್ಲ. ಬೆಳಗ್ಗೆಯಿಂದಲೂ ಮನೆಯ ಬಾಗಿಲ ಬಳಿ ನಿಂತು, ನೀವು ಬೇಕಾದರೆ ಆತ್ಮಹತ್ಯೆ ಮಾಡಿಕೊಳ್ಳಿ ನಮಗೆ ಗೊತ್ತಿಲ್ಲ. ನಮಗೆ ಮಾತ್ರ ಸಾಲದ ಕಂತು ಕಟ್ಟಲೇ ಬೇಕು ಎಂದು ಪಟ್ಟು ಹಿಡಿದಿದ್ದರು. ಈ ವಿಷಯ ತಿಳಿದ ಖಾಸಗಿ ಟಿವಿ ಚಾನೆಲ್ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿದಾಗ ಕ್ಯಾಮೆರಾ ಕಾಣುತ್ತಲೇ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಅಲ್ಲಿಂದ ಜಾಗೆ ಖಾಲಿ ಮಾಡಿದರು. ಬುಧವಾರವಷ್ಟೇ ಮೈಕ್ರೋ ಫೈನಾನ್ಸಗಳಲ್ಲಿ ಸಾಲ ಪಡೆದು ಹೈರಾಣಾಗಿರುವ ತಾಲೂಕಿನ ಮಹಿಳೆಯರು ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ತಮ್ಮ ಮಾಂಗಲ್ಯವನ್ನು ಮುಖ್ಯಮಂತ್ರಿಗಳಿಗೆ ಅಂಚೆ ಮೂಲಕ ಕಳುಹಿಸಿ ಪ್ರತಿಭಟನೆ ನಡೆಸಿದ್ದರು. ಆದರೂ ಕೂಡ ಇಂದು ಪುನಃ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಸಾಲ ವಸೂಲಾತಿಗಾಗಿ ಕಿರುಕುಳ ನೀಡುತ್ತಿರುವ ಘಟನೆ ನಡೆದಿರುವುದು ಅಚ್ಚರಿಯ ಸಂಗತಿಯಾಗಿದೆ.