ಸಾರಾಂಶ
- ಎಷ್ಟು ದುಡ್ಡು ಹೊಡೆದಿದ್ದೀರಿರಂತ ಗೊತ್ತಿದೆ ಎಂದು ಬಿಜೆಪಿಗೆ ಎಚ್ಚರಿಕೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆಯಲ್ಲಿ ಈ ಹಿಂದೆ ಆಡಳಿತ ಮಾಡಿದ್ದವರು (ಬಿಜೆಪಿ) ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಲಿ. ಈಗ ಬಾಯಿ ಬಿಟ್ಟರೆ ನಿಮ್ಮ ಹುಳುಕು ತೆಗೆಯಬೇಕಾಗುತ್ತದೆ. ಎಷ್ಟು ದೊಡ್ಡು ಹೊಡೆದಿದ್ದೀರಿ, ಏನು ಮಾಡಿದ್ದೀರಿ ಎಂಬುದೆಲ್ಲಾ ನನಗೆ ಗೊತ್ತಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ 57ನೇ ಜನ್ಮದಿನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಅಭಿನಂದನೆ, ಅ.ಭಾ.ವೀ.ಮ. ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಯಾದ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಸನ್ಮಾನ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ವಿಧಾನಸಭಾ ಕ್ಷೇತ್ರ ಒಂದು ತಾಲೂಕು ಒಳಗೊಂಡಿರುತ್ತದೆ. ಇಂತಹ 8 ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಗೆದ್ದ ನಂತರ ಪಾರ್ಲಿಮೆಂಟ್‌ನಲ್ಲಿ ಜಿಲ್ಲೆ, ರಾಜ್ಯದ ಹಿತಕಾಯುವ ನಿಟ್ಟಿನಲ್ಲಿ ಧೈರ್ಯವಾಗಿ ಗಟ್ಟಿಧ್ವನಿ ಎತ್ತಿ ಮಾತನಾಡುತ್ತಿದ್ದಾರೆ. ಈ ಹಿಂದೆ ಇಲ್ಲಿಂದ ಲೋಕಸಭೆಗೆ ಹೋದವರು 5 ವರ್ಷ ಸಂಸದರಾಗಿದ್ದರೂ ಬಾಯಿ ಬಿಟ್ಟಿರಲಿಲ್ಲ. ಒಂದು ಪತ್ರ ಬರೆದೆ ಅಂತಾ ಹೇಳುವುದರಲ್ಲೇ ಅವಧಿ ಪೂರ್ಣಗೊಳಿಸಿದರು. ದಾವಣಗೆರೆ ಇತಿಹಾಸವನ್ನೇ ಬದಲಿಸುವ ಶಕ್ತಿ ಇರುವ ಸಂಸದೆ ಡಾ.ಪ್ರಭಾ ಅವರಿಗೆ ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದೀರಿ. ನಿಮಗೆಲ್ಲರಿಗೂ ಅಭಿನಂದಿಸುವೆ ಎಂದು ಶಿವಶಂಕರಪ್ಪ ತಿಳಿಸಿದರು.
ನನಗೆ 6 ಸಲ ವಿಧಾನಸಭೆಗೆ ದಾವಣಗೆರೆ ಮತದಾರರು ಆಯ್ಕೆ ಮಾಡಿದ್ದಾರೆ. ಒಂದು ಸಲ ಸಂಸದನಾಗಿ ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದೀರಿ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹಕ್ಕೆ ಎಲ್ಲರಿಗೂ ಅಭಿನಂದಿಸುತ್ತೇನೆ. ದಾವಣಗೆರೆ ಶಾಂತವಾಗಿರುವಂತಹ ಊರು. ಎರಡ್ಮೂರು ದಶಕಗಳಿಂದ ಗಲಾಟೆ, ಗದ್ದಲ ಇಲ್ಲದ ಊರನ್ನು ನೋಡಿದ್ದೇವೆ ಎಂದು ಹೇಳಿದರು.ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದಂತೆ 5 ಗ್ಯಾರಂಟಿ ಯೋಜನೆಗಳನ್ನು ಕೊಟ್ಟು, ಮುಂದೆ ಅವುಗಳನ್ನು ಮುಂದುವರಿಸುತ್ತದೆ. ಸಿಎಂ ಸಿದ್ದರಾಮಯ್ಯ 5 ಗ್ಯಾರಂಟಿ ಇರುತ್ತವೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹೆಣ್ಣುಮಕ್ಕಳಿಗೂ ಯೋಜನೆಗಳಿಂದಾಗಿ ಸಾಕಷ್ಟು ಅನುಕೂಲವಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಕಾಂಗ್ರೆಸ್ ಪಕ್ಷವನ್ನು ಮತದಾರರು ಸದಾ ಬೆಂಬಲಿಸಬೇಕು ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಇನ್ನೂ 5 ವರ್ಷ ಅಧಿಕಾರದಲ್ಲಿ ಇರುತ್ತಾರೆ. ದಾವಣಗೆರೆ, ರಾಜ್ಯದ ಹಿತಕ್ಕೆ ಧಕ್ಕೆ ಬಾರದಂತೆ ಜನರ ಆಶೋತ್ತರಕ್ಕೆ ಪೂರಕವಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತಾರೆ. ಡಾ.ಪ್ರಭಾ ಅವರ ಬಗ್ಗೆ ನಾವು ಅಭಯ ನೀಡುತ್ತೇವೆ. 10 ಸಾವಿರ ಗಿಡ ನೆಡುವ ಕಾರ್ಯಕ್ರಮ ನಡೆದಿದೆ. ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆ ನೀರು ಸಮರ್ಪಕವಾಗಿ ಬಳಕೆಯಾಗಲಿದೆ. ಏನೇ ಆಗಬೇಕೆಂದರೂ ತಕ್ಷಣ ಕೆಲಸಗಳೂ ಆಗುತ್ತಿವೆ ಎಂದು ತಿಳಿಸಿದರು.ಜಿಲ್ಲಾ ಮಂತ್ರಿ ಎಸ್ಸೆಸ್ ಮಲ್ಲಿಕಾರ್ಜುನ ತಮ್ಮ ವರ್ಚಸ್ಸು ಉಪಯೋಗಿಸಿ ಕೆಲಸ ಮಾಡುತ್ತಿದ್ದಾರೆ. ಇತ್ತ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹಸಿರು ಕ್ರಾಂತಿ ಅಂತಾ ಮಾಡುತ್ತಿದ್ದಾರೆ. ಓವರ್ ಬ್ರಿಡ್ಜ್, ಅಂಡರ್ ಬ್ರಿಡ್ಜ್‌ಗಳನ್ನು ದಾವಣಗೆರೆಯಲ್ಲಿ ಮಾಡಿಸುತ್ತಾರೆಂಬ ಭರವಸೆ ಇದೆ ಎಂದು ಮಗ, ಸೊಸೆಯ ಮೇಲೆ ಜಿಲ್ಲೆಯ ಅಭಿವೃದ್ಧಿಯ ಕುರಿತಂತೆ ಕೆಲವು ಸಲಹೆ, ಸೂಚನೆಗಳನ್ನು ನೀಡಿ, ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳಿಗೆ ಡಾ.ಶಾಮನೂರು ಶಿವಶಂಕರಪ್ಪ ಕೃತಜ್ಞತೆ ಅರ್ಪಿಸಿದರು.
- - -ಬಾಕ್ಸ್ ರೇಣುಕಾಚಾರ್ಯ ಯಾಕೆ ಬರರ್ಬೇಕಿತ್ತು? ದಾವಣಗೆರೆಯಲ್ಲಿ 90ರ ದಶಕದಲ್ಲಿ ಗಲಾಟೆಯಾಗಿದ್ದನ್ನು ಬಿಟ್ಟರೆ ಮತ್ತೆ ಆಗಿರಲಿಲ್ಲ. ಆದರೆ, ಮೊನ್ನೆ ಕೆಲಸಕ್ಕೆ ಬಾರದ ರೀತಿ ಕೆಲವರು ಕೋಮು ಗಲಭೆ ಶುರು ಮಾಡಿದ್ದಾರೆ. ಇದಕ್ಕೆ ಯಾರು ಪ್ರೇರಣೆ ಮಾಡಿದ್ದಾರೆ ಎಂಬುದನ್ನು, ಇಡೀ ರಾಜ್ಯದಲ್ಲಿ ಏನಾಗುತ್ತಿದೆ ಎಂಬುದನ್ನು, ಇದರ ಹಿಂದೆ ಇದ್ದು ಬಿಜೆಪಿಯವರು ಮಾಡುತ್ತಿದ್ದಾರೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ. ಹೊನ್ನಾಳಿ ರೇಣುಕಾಚಾರ್ಯ ಇಲ್ಲಿಗೆ ಯಾಕೆ ಬರಬೇಕಿತ್ತು? ಇಲ್ಲಿ ಬಂದು ಗಲಾಟೆಗೆ ಯಾಕೆ ಪ್ರೋತ್ಸಾಹ ಕೊಡಬೇಕಿತ್ತು? ಇಂಥದ್ದಕ್ಕೆಲ್ಲಾ ಜಿಲ್ಲೆಯ ಅಧಿಕಾರಿಗಳು ಆಸ್ಪದ ಕೊಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
- - --ಫೋಟೋ: ಶಾಮನೂರು ಶಿವಶಂಕರಪ್ಪ