ಅಂದು ಚಲೇ ಜಾವ್, ಇಂದು ಚಲೇ ಆವ್: ಡಾ.ಸಿದ್ದನಗೌಡ ಪಾಟೀಲ್‌

| Published : Aug 08 2025, 01:00 AM IST

ಅಂದು ಚಲೇ ಜಾವ್, ಇಂದು ಚಲೇ ಆವ್: ಡಾ.ಸಿದ್ದನಗೌಡ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಚಲೇ ಜಾವ್ ಚಳವಳಿ ನಡೆಸಲಾಗಿತ್ತು. ಆದರೆ, ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚಲೇ ಆವ್ ಅನ್ನುವ ಮೂಲಕ ದೇಶದ ಸಂಪತ್ತನ್ನು ಮತ್ತೆ ವಿದೇಶಿಗರ ಕೈಗೆ ಕೊಡಲು ಮುಂದಾಗಿದ್ದಾರೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಚಲೇ ಜಾವ್ ಚಳವಳಿ ನಡೆಸಲಾಗಿತ್ತು. ಆದರೆ, ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚಲೇ ಆವ್ ಅನ್ನುವ ಮೂಲಕ ದೇಶದ ಸಂಪತ್ತನ್ನು ಮತ್ತೆ ವಿದೇಶಿಗರ ಕೈಗೆ ಕೊಡಲು ಮುಂದಾಗಿದ್ದಾರೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ವ್ಯಂಗ್ಯವಾಡಿದರು.

ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಸಿಪಿಐ ಶತಮಾನೋತ್ಸವದ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಬಹಿರಂಗ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ, ನರೇಂದ್ರ ಮೋದಿ ಅವರು ಇದೀಗ ಮತ್ತೆ ವಾಪಸ್ ವಿದೇಶಿ ಕಂಪನಿಗಳನ್ನು ಕರೆ ತರುತ್ತಿದ್ದಾರೆ. ಜೊತೆಗೆ ದೇಶದ ಭೂಮಿ ಹಾಗೂ ನೀರನ್ನು ಅವರಿಗೆ ನೀಡುವ ಮೂಲಕ ಮತ್ತೆ ದೇಶದ ಜನರ ಸ್ವತಂತ್ರ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಅಂಬಾನಿ, ಅಧಾನಿಗೆ ನೀಡಿರುವ ಸಾಲ ಮನ್ನಾ ಮಾಡುತ್ತಿದೆ. ಆದರೆ, ಹೂವು ಹಣ್ಣು ಮಾರುವ ಸಣ್ಣಪುಟ್ಟ ವರ್ತಕರಿಗೆ ಜಿಎಸ್‌ಟಿ ಹಾಕುತ್ತಿದ್ದಾರೆ. ಇದರಿಂದ ಮೋದಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ಜೊತೆಗೆ ಸಾಮಾನ್ಯ ಜನರ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಭೂಮಿಯನ್ನು ಬಂಡವಾಳಶಾಹಿಗಳು ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟರು. ಇದನ್ನು ವಾಪಸ್ ಪಡೆಯುವಂತೆ ಇಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಮನವಿ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ಸಹ ಬಡವರ ವಿರುದ್ಧವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಕಾರ್ಮಿಕರು ಹಾಗೂ ರೈತರು ಬೆವರು ಸುರಿಸಿ ದುಡಿದ ಶೇ. 60 ರಷ್ಟು ಸಂಪತ್ತು ದೇಶದಲ್ಲಿರುವ ಶೇ. 1ರಷ್ಟು ಶ್ರೀಮಂತರ ಬಳಿ ಇದೆ. ಇದರಿಂದಾಗಿ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಎಂದರು.

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಸೇರಿಕೊಂಡು ಧರ್ಮ ಆಧಾರಿತ ರಾಜಕಾರಣದ ಹಿನ್ನೆಲೆಯಲ್ಲಿ ಶ್ರೇಣಿಕೃತ ಸಮಾಜ ನಿರ್ಮಾಣಕ್ಕೆ ಮುಂದಾಗಿವೆ. ಆದರೆ, ಸಿಪಿಐ ಮಾತ್ರ ಜಾತಿ ಇಲ್ಲದ, ಎಲ್ಲಾ ಪ್ರಜೆಗಳು ಸಮಾನವಾಗಿರುವ ಸಮಾಜ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸುತ್ತಿದೆ ಎಂದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಮೂಲಕ ಜನರಿಗೆ ಕೆಲ ಅನುಕೂಲ ಮಾಡಿಕೊಟ್ಟಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವ ಮೊದಲು ಕೃಷಿ ಕಾಯ್ದೆಗೆ ತಿದ್ದುಪಡಿ ತರುತ್ತೇವೆ ಎಂದಿದ್ದರು. ಆದರೆ ಇದುವರೆಗೆ ಆ ಕೆಲಸವನ್ನು ಮಾಡಿಲ್ಲ. ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಇಳಿಸುವುದಾಗಿ ಹೇಳಿದ್ದರು. ಅದರ ಬಗ್ಗೆಯೂ ಇದೀಗ ಪ್ರಸ್ತಾಪವನ್ನೇ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್‌.ಎಲ್.ರಾಧಾ ಸುಂದರೇಶ್ ವಹಿಸಿದ್ದರು. ಸಿಪಿಐ ಮುಖಂಡರಾದ ಪಿ.ವಿ. ಲೋಕೇಶ್, ಎಚ್.ಎಂ.ರೇಣುಕಾರಾಧ್ಯ, ಜಿ.ರಘು, ಎಸ್.ವಿಜಯಕುಮಾರ್, ಬಿ.ಅಮ್ಜದ್‌ ಇದ್ದರು.