ಮಕ್ಕಳ ಮೇಲೆ ಪ್ರೀತಿ ಇದ್ದರೆ ಹೆಲ್ಮೆಟ್‌ ಹಾಕಿ: ಪೊಲೀಸ್ ಆಯುಕ್ತ ಬಿ.ದಯಾನಂದ್

| Published : Mar 24 2024, 01:30 AM IST / Updated: Mar 24 2024, 08:58 AM IST

ಮಕ್ಕಳ ಮೇಲೆ ಪ್ರೀತಿ ಇದ್ದರೆ ಹೆಲ್ಮೆಟ್‌ ಹಾಕಿ: ಪೊಲೀಸ್ ಆಯುಕ್ತ ಬಿ.ದಯಾನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಪ್ರಾಣದ ಮೇಲೆ ಪ್ರೀತಿ ಇದ್ದರೆ, ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಸುರಕ್ಷತೆ ದೃಷ್ಟಿಯಿಂದ ಮೂರು ವರ್ಷದ ಮಕ್ಕಳಿಗೂ ಸಹ ಹೆಲ್ಮೆಟ್ ಹಾಕಬೇಕು ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಪೋಷಕರಿಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಕ್ಕಳ ಪ್ರಾಣದ ಮೇಲೆ ಪ್ರೀತಿ ಇದ್ದರೆ, ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಸುರಕ್ಷತೆ ದೃಷ್ಟಿಯಿಂದ ಮೂರು ವರ್ಷದ ಮಕ್ಕಳಿಗೂ ಸಹ ಹೆಲ್ಮೆಟ್ ಹಾಕಬೇಕು ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಪೋಷಕರಿಗೆ ಹೇಳಿದರು.

ಮಹಾಲಕ್ಷ್ಮಿ ಲೇಔಟ್‌ನ ಗೆಳೆಯರ ಬಳಗ ವೃತ್ತ ಸಮೀಪ ಡಾ। ರಾಜ್‌ಕುಮಾರ್ ಸಭಾಂಗಣದಲ್ಲಿ ಶನಿವಾರ ಉತ್ತರ ವಿಭಾಗದ ಪೊಲೀಸರು ಆಯೋಜಿಸಿದ್ದ ‘ಜನ ಸಂಪರ್ಕ ಸಭೆ’ಯಲ್ಲಿ ಮಾತನಾಡಿದ ಅವರು, ಜೀವ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

ಶಾಲೆಗಳಿಗೆ ಮಕ್ಕಳನ್ನು ಬಿಡಲು ಹೋಗುವಾಗಲು ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಅದರಲ್ಲೂ ಮೂರು ವರ್ಷದ ಮಕ್ಕಳು ಹೆಲ್ಮೆಟ್ ಹಾಕಿಲ್ಲವೆಂಬ ಕಾರಣಕ್ಕೆ ಕ್ಯಾಮೆರಾ ಆಧರಿಸಿ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಮೂರು ವರ್ಷದ ಮಕ್ಕಳು ಹೇಗೆ ಹೆಲ್ಮೆಟ್ ಹಾಕಲು ಸಾಧ್ಯ ಎಂದು ಮನೋಜ್ ಎಂಬುವರು ಖಾರವಾಗಿ ಪ್ರಶ್ನಿಸಿದರು.

ಆಗ ಉತ್ತರಿಸಿದ ಆಯುಕ್ತರು, ನಿಮ್ಮ ಮಕ್ಕಳ ಮೇಲೆ ನಿಮಗೆ ಪ್ರೀತಿ ಇದ್ದರೆ ಹೆಲ್ಮೆಟ್ ಹಾಕಲೇಬೇಕು. ಅಪಘಾತಗಳ ಸಂಭವಿಸಿದರೆ ಮಕ್ಕಳ ತಲೆಗೆ ಪೆಟ್ಟು ಬೀಳುವುದಿಲ್ಲವೇ ಎಂದು ಮರುಪ್ರಶ್ನಿಸಿ, ಜೀವ ರಕ್ಷಣೆ ವಿಚಾರವಾಗಿ ಯಾವುದೇ ವಿನಾಯಿತಿ ಬರುವುದಿಲ್ಲ. ಮಕ್ಕಳ ಸುರಕ್ಷತೆಗೆ ಹೆಲ್ಮೆಟ್ ಹಾಕಲೇಬೇಕಿದೆ. ಮಕ್ಕಳ ಭವಿಷ್ಯದ ಪ್ರಶ್ನೆ ಇದಾಗಿದೆ ಎಂದು ಆಯುಕ್ತರು ಬುದ್ಧಿಮಾತು ಹೇಳಿದರು.

ಹಳೇ ಪೊಲೀಸ್ ಗಸ್ತು ವ್ಯವಸ್ಥೆ ಕುರಿತು ಕೆಲವರು ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಈ ಮೊದಲು ನಗರದಲ್ಲಿ ಸ್ಥಳೀಯ ನಿವಾಸಿಗಳನ್ನು ಒಳಗೊಂಡ ಗಸ್ತು ವ್ಯವಸ್ಥೆ ಜಾರಿಯಲ್ಲಿತ್ತು. 

ಆದರೆ ಕೆಲವು ಆರೋಪಗಳ ಕಾರಣಕ್ಕೆ ಆ ವ್ಯವಸ್ಥೆಯನ್ನು ರದ್ದುಪಡಿಸಲಾಗಿತ್ತು. ಈಗ ಮತ್ತೆ ಹಳೇ ಗಸ್ತು ವ್ಯವಸ್ಥೆಯನ್ನು ಪುನಾರಂಭಿಸಲು ಯೋಜಿಸಲಾಗಿದ್ದು, ಈಗಾಗಲೇ ಈ ಸಂಬಂಧ ಎರಡು ಠಾಣೆಗಳ ವ್ಯಾಪ್ತಿಯಲ್ಲಿ ಪ್ರಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. 

ಅಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಅವಲೋಕಿಸಿ ನಗರ ವ್ಯಾಪ್ತಿ ಪರಿಷ್ಕೃತ ಗಸ್ತು ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಸೋಲದೇವನಹಳ್ಳಿ ಠಾಣೆಯಲ್ಲಿ ಸೌಜನ್ಯಯುತವಾಗಿ ನಡೆದುಕೊಳ್ಳುವ ಠಾಣಾಧಿಕಾರಿ ನೇಮಿಸುವಂತೆ ಆಯುಕ್ತರಿಗೆ ನಾಗರಿಕರು ಒತ್ತಾಯಿಸಿದರು. ಸೋಲದೇವನಹಳ್ಳಿ ಠಾಣೆಗೆ ದೂರು ನೀಡಲು ಹೋಗುವ ಸಾರ್ವಜನಿಕರ ಜತೆ ಪೊಲೀಸರು ಅಗೌರಯುತವಾಗಿ ನಡೆದುಕೊಳ್ಳುತ್ತಾರೆ. 

ದೂರು ಸ್ವೀಕರಿಸಲು ಗಂಟೆಗಟ್ಟಲೇ ಅನಗತ್ಯವಾಗಿ ನಾಗರಿಕರನ್ನು ಪೊಲೀಸರು ಕಾಯಿಸುತ್ತಾರೆ ಎಂದು ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಆಯುಕ್ತರು ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್‌ ಹಾಗೂ ಸಂಚಾರ ಡಿಸಿಪಿ ಡಿ.ಆರ್‌.ಸಿರಿಗೌರಿ ಉಪಸ್ಥಿತರಿದ್ದರು.

ನೋಂದಣಿ ಸಂಖ್ಯೆ ಮರೆ ಮಾಚಿದರೆ ಕೇಸ್ ದಾಖಲು: ನೋಂದಣಿ ಸಂಖ್ಯೆ ಮರೆಮಾಚಿಕೊಂಡು ಓಡಾಡುವ ವಾಹನಗಳ ಮೇಲೆ ವಂಚನೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.

ಜನಸಂಪರ್ಕ ಸಭೆಯಲ್ಲಿ ಕೆಲವರು ನಂಬರ್ ಪ್ಲೇಟ್ ಮುಚ್ಚಿಕೊಂಡು ವಾಹನ ಓಡಿಸುತ್ತಾರೆ ಎಂದು ನಾಗರಿಕರ ದೂರು ನೀಡಿದರು. ಈ ದೂರಿಗೆ ಉತ್ತರಿಸಿದ ಆಯುಕ್ತರು, ಈಗಾಗಲೇ ನಂಬರ್ ಪ್ಲೇಟ್‌ ಮರೆ ಮಾಚುವವರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. 

ಆ ರೀತಿಯ ವಾಹನಗಳನ್ನು ರಸ್ತೆಯಲ್ಲೇ ಅಡ್ಡಗಟ್ಟಿ ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಅಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯಲ್ಲಿ ಪ್ರತ್ಯೇಕವಾಗಿ ವಂಚನೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.