ಸಾರಾಂಶ
ಬ್ಯಾಡಗಿ: ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೇ ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳನ್ನು ಉಳಿಸಿಕೊಳ್ಳಲು ಹಾಗೂ ನಮ್ಮ ಇಷ್ಟಾರ್ಥ ಸಿದ್ಧಿಗಳಿಗಾಗಿ ಜಾತ್ರೆ ಸೇರಿದಂತೆ ಹಬ್ಬ ಹರಿದಿನ ನಡೆಸಬೇಕಾಗುತ್ತದೆ. ಡಾಂಬಿಕತನ ಬಿಟ್ಟು ಶ್ರದ್ಧಾಭಕ್ತಿಯಿಂದ ದೇವತೆಗಳ ಮೊರೆ ಹೋದಲ್ಲಿ ಖಂಡಿತವಾಗಿ ಫಲಪ್ರಾಪ್ತಿಯಾಗುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಶನಿವಾರ ಪಟ್ಟಣದ ಚಾವಡಿ ರಸ್ತೆಯಲ್ಲಿ ಗ್ರಾಮದೇವತೆ (ದ್ಯಾಮವ್ವದೇವಿ) ಜಾತ್ರಾ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರಪಂಚದಾದ್ಯಂತ 10 ಸಾವಿರಕ್ಕೂ ಹೆಚ್ಚು ವಿಭಿನ್ನ ಧರ್ಮಗಳಿವೆ. ನಮ್ಮ ನಮ್ಮಲ್ಲೇ ಭಿನ್ನಮತವಿರುವ ಕಾರಣಕ್ಕೆ ಒಂದು ಧರ್ಮವನ್ನು ಹೀಗೆಯೇ ಇರಲಿದೆ ಎಂದು ನಿರೂಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಆರ್ಥಿಕವಾಗಿ ನಾವು ಎಷ್ಟೇ ಪ್ರಬಲವಾಗಿದ್ದರೂ ಸಾರ್ಥಕ ಬದುಕಿಗೆ ಧಾರ್ಮಿಕ ಆಚರಣೆಗಳೇ ಅಂತಿಮ ಸತ್ಯವಾಗಿದೆ ಎಂದರು.ದುರುದ್ದೇಶದ ಆಚರಣೆಗಳಿಗೆ ಕಡಿವಾಣ: ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಡಾ. ಬಾಲಚಂದ್ರಗೌಡ ಪಾಟೀಲ ಮಾತನಾಡಿ, ದ್ಯಾಮವ್ವದೇವಿ ಎಲ್ಲ ಆಚರಣೆಗಳಲ್ಲಿ ತನ್ನನ್ನು ತಾನು ಗುರ್ತಿಸಿಕೊಳ್ಳುವ ಮೂಲಕ ನಿರಂತರ ಸಂಪರ್ಕದೊಂದಿಗೆ ಮನುಷ್ಯ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕರಲ್ಲಿ ಧಾರ್ಮಿಕ ನಂಬಿಕೆಗಳನ್ನು ಮೂಡಿಸುವುದೇ ಕಷ್ಟಸಾಧ್ಯವಾಗಿದೆ ಎಂದರು.
ಬದಲಾವಣೆಗೆ ನಾವೇ ಮೊದಲ ಮೆಟ್ಟಿಲಾಗೋಣ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಗ್ರಾಮದೇವತೆ ಜಾತ್ರೆ ಎಂದರೆ ಜನರಿಗೆ ಸುಖ, ಶಾಂತಿ ನೆಮ್ಮದಿಗೆ ಆಚರಿಸಿಕೊಂಡು ಬರಲಾಗುತ್ತಿರುವ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಒಂದಾಗಿದೆ. ಆದರೆ ಇತ್ತೀಚೆಗೆ ಜಾತ್ರೆಗಳಲ್ಲಿ ಡಂಬಾಚರಣೆ ಹೆಚ್ಚಿದೆ. ಆದರೆ ನಮ್ಮೂರ ಜಾತ್ರೆಯಲ್ಲಿ ಇವುಗಳಿಗೆ ಆಸ್ಪದ ನೀಡದಿರುವುದು ಉತ್ತಮ ನಿರ್ಧಾರ. ಇದರಿಂದ ಕೆಲವರಿಗೆ ನೋವಾಗಿರುವುದು ಸಹಜ. ಆದರೆ ಬದಲಾವಣೆಗೆ ನಾವೇ ಮೊದಲನೆ ಮೆಟ್ಟಿಲಾಗೋಣ ಎಂದರು.ಮುಪ್ಪಿನೇಶ್ವರನ ಮರೆಯದಿರಿ: ಮುಪ್ಪಿನೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಗ್ರಾಮದೇವತೆ ಜಾತ್ರಾ ಸಮಿತಿ ಕಳೆದೊಂದು ತಿಂಗಳಿಂದ ಹಗಲಿರುಳು ಶ್ರಮಿಸುತ್ತಿದೆ. ಪಟ್ಟಣದ ಹಿತದೃಷ್ಟಿಯಿಂದ ಗ್ರಾಮದೇವತೆ ಜಾತ್ರೆ ಎಷ್ಟು ಮುಖ್ಯವೋ ಪಟ್ಟಣದಲ್ಲಿನ ಮುಪ್ಪಿನೇಶ್ವರನ ಆಶೀರ್ವಾದ ಸಹ ಅಷ್ಟೇ ಮುಖ್ಯ. ಯಾವುದೇ ಧಾರ್ಮಿಕ ಕೆಲಸ ಕಾರ್ಯಗಳಿಗೂ ಮುನ್ನ ಮುಪ್ಪಿನೇಶ್ವರ ಗುರುಗಳನ್ನು ಮರೆಯದೇ ನೆನೆಯುವ ಕಾರ್ಯವಾಗಲಿ ಎಂದರು.
ಇದಕ್ಕೂ ಮುನ್ನ ಗ್ರಾಮದೇವಿ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಸಕ ಬಸವರಾಜ ಶಿವಣ್ಣನವರ ನೆರವೇರಿಸಿದರು. ಗಂಗಣ್ಣ ಎಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಪುಟ್ಟಪ್ಪ ಛತ್ರದ, ಕುಮಾರಗೌಡ್ರ ಪಾಟೀಲ, ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸದಸ್ಯ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಚಂದ್ರಣ್ಣ ಶೆಟ್ಟರ, ಸರೋಜಾ ಉಳ್ಳಾಗಡ್ಡಿ, ಕವಿತಾ ಸೊಪ್ಪಿನಮಠ, ಮಾಜಿ ಸದಸ್ಯರಾದ ಮುರಿಗೆಪ್ಪ ಶೆಟ್ಟರ, ದುರ್ಗೇಶ ಗೋಣೆಮ್ಮನವರ, ವೇ. ಗಂಗಾಧರಶಾಸ್ತ್ರೀ ಹಿರೇಮಠ, ರಾಚಯ್ಯನವರು ಓದೋಸಿಮಠ, ದಾನಪ್ಪ ಚೂರಿ, ಜಯಣ್ಣ ಬೋವಿ, ಡಾ. ಹೊತಗಿಗೌಡ್ರ, ಸುರೇಶ ಅಸಾದಿ, ಸಂಜೀವ ಮಡಿವಾಳರ, ಮುಕ್ತಿಯಾರ ಮುಲ್ಲಾ, ಬುದ್ಧಿವಂತ ಹಂಜಗಿ ಉಪಸ್ಥಿತರಿದ್ದರು. ಎ.ಟಿ. ಪೀಠದ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ದೇಸೂರ ವಂದಿಸಿದರು.