ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಬಳ್ಳಾರಿ: ಪ್ರತಿದಿನ ವ್ಯಾಜ್ಯ ಪ್ರಕರಣಗಳೊಂದಿಗೆ ಬದುಕುವ ಬದಲು ಮುತುವರ್ಜಿ ವಹಿಸಿ ಉದಾರ ಮನಸ್ಸಿನಿಂದ ಪ್ರಕರಣಗಳನ್ನು ಸಂಧಾನ ಮೂಲಕ ಇತ್ಯರ್ಥಪಡಿಸಿಕೊಂಡರೆ ನೆಮ್ಮದಿ ಜೀವನ ನಿಮ್ಮದಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಹೇಳಿದರು.
ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದ ವಿವಿಧ ಪೀಠಗಳಲ್ಲಿ ಆಯೋಜಿಸಿದ್ದ 2025 ರ ಕೊನೆಯ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ದೊಡ್ಡ ಪ್ರಮಾಣದ ಬಾಕಿ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಮತ್ತು ಸಂಧಾನದ ಮೂಲಕ ಇತ್ಯರ್ಥಪಡಿಸುವುದು ಅದಾಲತ್‌ನ ಮುಖ್ಯ ಉದ್ದೇಶವಾಗಿತ್ತು ಎಂದರು.ಅದಾಲತ್‌ನಲ್ಲಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ ಅನೇಕ ವ್ಯಾಜ್ಯಪೂರ್ವ ಪ್ರಕರಣಗಳು ಕೂಡ ಸೇರಿವೆ, ಅವುಗಳು ನ್ಯಾಯಾಲಯಕ್ಕೆ ಹೋಗುವುದನ್ನು ತಡೆಯುತ್ತದೆ. ಲೋಕ್ ಅದಾಲತ್ ಮೂಲಕ ಅಪಘಾತ ವಿಮೆ ಪ್ರಕರಣಗಳು, ಚೆಕ್ ಬೌನ್ಸ್, ವಿವಾಹ ವಿವಾದಗಳು, ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳು ಮತ್ತು ಗ್ರಾಹಕರ ದೂರುಗಳು ಸೇರಿದಂತೆ ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೂ ಪರಿಹಾರ ದೊರಕಿದೆ. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದವರಿಗೆ ಸಂಪೂರ್ಣ ನ್ಯಾಯಾಲಯ ಶುಲ್ಕ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದರು.
ವಿವಿಧ ಬಗೆಯ ಪ್ರಕರಣ ಇತ್ಯರ್ಥ:ಜಿಲ್ಲೆಯಲ್ಲಿನ 9 ಕೌಟುಂಬಿಕ ಪ್ರಕರಣಗಳಲ್ಲಿನ ವಿವಾದಗಳನ್ನು ಬಗೆಹರಿಸಿ ದೂರ-ದೂರ ಇದ್ದ ಪತಿ-ಪತ್ನಿಯನ್ನು ಒಂದು ಮಾಡಿ ಒಟ್ಟಿಗೆ ಜೀವನ ಮಾಡುವಂತೆ ಸಂಧಾನ ಮಾಡಲಾಯಿತು. ಸುಮಾರು 85 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮುಖಾಂತರ ಸಂಧಾನ ಮಾಡಿ ಸುಮಾರು ₹2.48 ಕೋಟಿ ಪರಿಹಾರವಾಗಿ ನೀಡಲಾಯಿತು.
44 ಬ್ಯಾಂಕ್ ದಾವೆಗಳನ್ನು ರಾಜಿ ಮೂಲಕ ಸಂಧಾನ ಮಾಡಿ ₹1.83 ಕೋಟಿ ಮತ್ತು 18 ಹಣ ವಸೂಲಾತಿ ದಾವೆಗಳನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಿ ₹46.15 ಲಕ್ಷ ಪಾವತಿಸಲಾಗಿದೆ. ಅದೇ ರೀತಿ 48 ಅಪಘಾತ ಪರಿಹಾರದ ಪ್ರಕರಣಗಳನ್ನು ಮುಕ್ತಾಯಗೊಳಿಸಿ 5.46 ಕೋಟಿ ಪರಿಹಾರವಾಗಿ ನೀಡಿದೆ.ನೌಕರರ ಪರಿಹಾರದ ಕಾಯ್ದೆ ಅಡಿ 4 ಪ್ರಕರಣಗಳಲ್ಲಿ ₹54.80 ಲಕ್ಷ ಪರಿಹಾರವಾಗಿ ಕೊಡಮಾಡಲಾಗಿದೆ. 17 ಪಾಲುವಿಭಾಗ ದಾವೆಗಳನ್ನು, 20 ಎಂವಿಸಿ ಅಮಲ್ದಾರಿ ಪ್ರಕರಣಗಳನ್ನು ಹಾಗೂ 71 ಇತರೆ ಪ್ರಕರಣಗಳನ್ನು ಮುಕ್ತಾಯಗೊಳಿಸಿ ₹4.59 ಕೋಟಿ ಪರಿಹಾರವಾಗಿ ಕೊಡಮಾಡಲಾಗಿದೆ. 14 ಜೀವನಾಂಶ ಕೋರಿ ಹಾಕಿದ ಅರ್ಜಿಗಳು ರಾಜಿ ಸಂಧಾನ ಮೂಲಕ ತೀರ್ಮಾನಗೊಂಡು ₹4.17 ಲಕ್ಷ ಪರಿಹಾರವಾಗಿ ಕೊಡಮಾಡಲಾಗಿದೆ. ಹಲವಾರು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಈ ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಲಾಗಿದೆ ಎಂದು ತಿಳಿಸಿದರು.
23 ವರ್ಷದಿಂದ ಬಾಕಿ ಇದ್ದ ಸಿವಿಲ್ ದಾವೆ ನಂ.335/2002 ಈ ಪ್ರಕರಣವನ್ನು, 9 ವರ್ಷದಿಂದ ಬಾಕಿ ಇದ್ದ ಸಿವಿಲ್ ದಾವೆ ನಂ.643/2016 ಇವುಗಳನ್ನು ಹಾಗೂ 5 ವರ್ಷಕ್ಕಿಂತ ಮೇಲ್ಪಟ್ಟು ಬಾಕಿ ಇದ್ದ 4 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಖಾಂತರ ಮುಕ್ತಾಯಗೊಳಿಸಲಾಗಿದೆ.ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ ಸೇರಿದಂತೆ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಅಧಿಕಾರಿಗಳು ಇದ್ದರು.