ಸಾರಾಂಶ
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಮೃತ್ ೨.೦ ಯೋಜನೆ ಸಹಕಾರಿ, ಯೋಜನೆ ಜಾರಿಗೆ ತೊಂದರೆ ಮಾಡಿದರೆ ಮುಂದೆ ಪಶ್ಚಾತ್ತಾಪ ಮಾಡಿಕೊಳ್ಳಬೇಕಾಗುತ್ತದೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಗಜೇಂದ್ರಗಡ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಮೃತ್ ೨.೦ ಯೋಜನೆ ಸಹಕಾರಿ, ಯೋಜನೆ ಜಾರಿಗೆ ತೊಂದರೆ ಮಾಡಿದರೆ ಮುಂದೆ ಪಶ್ಚಾತ್ತಾಪ ಮಾಡಿಕೊಳ್ಳಬೇಕಾಗುತ್ತದೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಕುರಿತು ಚರ್ಚಿಸುವಾಗ ಪುರಸಭೆ ಸದಸ್ಯ ವೀರಪ್ಪ ಪಟ್ಟಣಶೆಟ್ಟಿ ಉಣಚಗೇರಿ ಗ್ರಾಮದಲ್ಲಿ ಅಮೃತ್ ೨.೦ ಯೋಜನೆ ಸಮರ್ಪಕವಾಗುತ್ತಿಲ್ಲ. ಹೀಗಾಗಿ ವೈಜ್ಞಾನಿಕ ಮಾದರಿಯಲ್ಲಿ ನಡೆಸಿ ಎಂದಾಗ, ಮೊದಲು ಪೈಪ್‌ಲೈನ್ ಮಾಡುತ್ತಾರೆ. ಕೆಲಸ ಮಾಡುವವರಿಗೆ ತಕರಾರು ಬೇಕಾಗಿರುತ್ತದೆ. ಹೀಗಾಗಿ ಯೋಜನೆಗೆ ಸಹಕಾರ ನೀಡಿ ಎಂದರು. ಆದರೆ ವೀರಪ್ಪ ಪಟ್ಟಣಶೆಟ್ಟಿ, ಕೆಲಸ ಮಾಡಲು ಬೇಡ ಎಂದಿಲ್ಲ, ಮೊದಲು ಪ್ಲಾಟ್‌ನಲ್ಲಿ ಮುಗಿಸಿಕೊಂಡು ಬನ್ನಿ, ಬಳಿಕ ಗ್ರಾಮದಲ್ಲಿ ಮಾಡಿ ಎಂದಿದ್ದೇನೆ. ಗಜೇಂದ್ರಗಡ ಪಟ್ಟಣದ ವಾರ್ಡ್‌ಗಳಲ್ಲಿ ಅವರ ಕೆಲಸ ನೋಡಿದ್ದೇನೆ. ಹೀಗಾಗಿ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತೀರಿ ಎಂದು ವಾದಿಸಿದಾಗ, ಗರಂ ಆದ ಶಾಸಕರು, ಊರಾಗ್ ಹೋಗಿ ಜನರಿಗೆ ಕೇಳಿ, ನೀರು ಬೇಕೋ, ಬೇಡಾ ಎಂದು ಕೇಳಿ, ಸಮ್ಮತಿ ನೀಡಿದರೆ ಮಾಡಿ, ಬೇಡ ಎಂದರೆ ಬೀಡಿ. ಎರಡ್ಮೂರು ತಿಂಗಳಲ್ಲಿ ಯೋಜನೆ ಪೂರ್ಣ ಆಗುತ್ತದೆ. ಪುರಸಭೆ ವ್ಯಾಪ್ತಿಯ ಎಲ್ಲ ಮನೆಗಳಿಗೂ ಯೋಜನೆಯ ಲಾಭ ತಲುಪಬೇಕು ಎಂದರು. ಪಟ್ಟಣದಲ್ಲಿ ಶೌಚಾಲಯಗಳ ನಿರ್ವಹಣೆ ಅಸಮರ್ಪಕವಾಗುತ್ತಿದೆ. ಹೀಗಾಗಿ ಶೌಚಾಲಯ ನಿರ್ವಹಣೆಗೆ ಆದ್ಯತೆ ನೀಡಿ ಎಂದಾಗ ಪುರಸಭೆ ಸದಸ್ಯ ವಾಯ್.ಬಿ. ತಿರಕೋಜಿ ೨ನೇ ವಾರ್ಡಿನಲ್ಲಿ ಶೌಚಾಲಯ ನಿರ್ಮಾಣ ಮಾಡಿ ಎಂದರೆ ಮಾಡುತ್ತಿಲ್ಲ. ಪರಿಣಾಮ ಬಯಲು ಶೌಚ ವ್ಯವಸ್ಥೆ ಇನ್ನೂ ಜೀವಂತವಿದೆ ಎಂದಾಗ ರೂಪೇಶ ರಾಠೋಡ ಹಾಗೂ ಕೌಸರಬಾನು ಹುನಗುಂದ ಸಹ ೯ ಮತ್ತು ೧೦ನೇ ವಾರ್ಡಿನಲ್ಲಿನ ಬಯಲು ಶೌಚ ಹಾಗೂ ಶೌಚಾಲಯ ನಿರ್ವಹಣೆಯಾಗುತ್ತಿಲ್ಲ ಎಂದರೆ ಪಟ್ಟಣದಲ್ಲಿ ಬೀದಿ ದನಗಳು, ಬೀದಿ ನಾಯಿಗಳ ಹಾವಳಿ ಕುರಿತು ಸದಸ್ಯರು ಶಾಸಕ ಗಮನ ಸೆಳೆದಾಗ, ಬೀದಿ ದನಗಳ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚಿಸುತ್ತೇನೆ. ಶೌಚಾಲಯಗಳ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ, ಸಹಕಾರ ನೀಡುವುದಾಗಿ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರಗೆ ತಿಳಿಸಿದ ಶಾಸಕರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಯ ವಿಷಯ ಪ್ರಸ್ತಾಪವಾದಾಗ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮೂರ್ತಿಗಳನ್ನು ಪಟ್ಟಣದ ಪುರಸಭೆ ಆವರಣದಲ್ಲಿ ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಟ್ಟಡ ಪರವಾನಗಿ ಶುಲ್ಕ ಹೆಚ್ಚಳಕ್ಕೆ ಹಸಿರು ನಿಶಾನೆ: ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಕಟ್ಟಡ ಪರವಾನಗಿ ಶುಲ್ಕವನ್ನು ಹೆಚ್ಚಳ ಮಾಡಿಲ್ಲ. ಇನ್ನುಳಿದ ಸಂಸ್ಥೆಗಳಲ್ಲಿ ಹೆಚ್ಚಿಸಲಾಗಿದೆ. ಹೀಗಾಗಿ ಹೆಚ್ಚಳ ಮಾಡಲು ಅವಕಾಶ ನೀಡುವಂತೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸಭೆಯ ಗಮನಕ್ಕೆ ತಂದಾಗ ಸದಸ್ಯರು ಮೊದಲು ಪರವಾನಗಿ ನೀಡುವ ಪದ್ಧತಿಯನ್ನು ಪಾರದರ್ಶಕ ಮಾಡಿಕೊಳ್ಳಿ, ಸ್ಥಳಕ್ಕೆ ಭೇಟಿ ನೀಡಿ ಎಂದು ತಾಕೀತು ಮಾಡಿದ ಬಳಿಕ ವಸತಿ ೮ ಹಾಗೂ ವಾಣಿಜ್ಯ ೧೦ ಪ್ರತಿಶತಕ್ಕೆ ಏರಿಸಲು ಹಸಿರು ನಿಶಾನೆ ನೀಡಲಾಯಿತು.ಕಪ್ಪುಪಟ್ಟಿಗೆ ಸೇರಿಸಲು ಸೂಚನೆ: ಪಟ್ಟಣದಲ್ಲಿ ಎಸ್‌ಎಫ್‌ಸಿ ಮತ್ತು ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಟೆಂಡರ್‌ಗಳನ್ನು ಹಿಡಿದು, ಸಕಾಲದಲ್ಲಿ ಕೆಲಸ ಮಾಡದ ಗುತ್ತಿಗೆದಾರರ ವರ್ತನೆಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಶಾಸಕ ಜಿ.ಎಸ್. ಪಾಟೀಲ ಎದುರು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರ ದೂರಿಗೆ ಸ್ಪಂದಿಸಿದ ಶಾಸಕರು, ಸಮರ್ಪಕವಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಅಧಿಕಾರಿಗಳು ಸೇರಿಸಿ, ಪುರಸಭೆ ವ್ಯಾಪ್ತಿಯ ಟೆಂಡರ್‌ನಲ್ಲಿ ಅವರು ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದರು.ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ಸದಸ್ಯರಾದ ಮುರ್ತುಜಾ ಡಾಲಾಯತ್, ಮೂಕಪ್ಪ ನಿಡಗುಂದಿ, ಕನಕಪ್ಪ ಅರಳಿಗಿಡದ, ರಾಜು ಸಾಂಗ್ಲೀಕರ, ಲೀಲಾ ಸವಣೂರ, ದ್ರಾಕ್ಷಾಯಿಣಿ ಚೋಳಿನ, ಬಸವರಾಜ ಹೂಗಾರ ಸೇರಿ ಅಧಿಕಾರಿಗಳು ಇದ್ದರು.