ಸಾರಾಂಶ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ದ ಶಾಸಕ ಯತ್ನಾಳ್ ತಂಡ ಹಗುರವಾಗಿ ಮಾತನಾಡಿದರೆ ಬಿ.ಎಸ್.ವೈ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ಎಚ್ಚರಿಸಿದರು.
ಕನ್ನಡಪ್ರಭವಾರ್ತೆ ತುರುವೇಕೆರೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ದ ಶಾಸಕ ಯತ್ನಾಳ್ ತಂಡ ಹಗುರವಾಗಿ ಮಾತನಾಡಿದರೆ ಬಿ.ಎಸ್.ವೈ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ಎಚ್ಚರಿಸಿದರು. ತಾಲೂಕಿನ ಅರಳಿಕೆರೆ ಗ್ರಾಮದ ಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿಎಸ್.ವೈ ಪಕ್ಷದ ಶಕ್ತಿ. ಕರ್ನಾಟಕ ರಾಜ್ಯವನ್ನು ಸುತ್ತಿ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಕಮಲ ಅರಳುವಂತೆ ಮಾಡಿದ ಕೀರ್ತಿ ಬಿಎಸ್.ವೈ ಸಲ್ಲುತ್ತದೆ. ೪ ಬಾರಿ ಮುಖ್ಯಮಂತ್ರಿಗಳಾಗಿ ರೈತ ಬಜೆಟ್ ಮಂಡಿಸಿದ್ದರು. ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ, ವಿದ್ಯಾರ್ಥಿಗಳಿಗೆ ಸೈಕಲ್, ರೈತರ ಹಾಲಿಗೆ ನೇರ ಪ್ರೋತ್ಸಾಹ ಧನ ಸೇರಿದಂತೆ ಹಲವು ಜನಪರವಾದ ಯೋಜನೆಗಳನ್ನು ತಂದಿದ್ದರು. ಬಿಎಸ್.ವೈ ಇಲ್ಲದೇ ಬಿಜೆಪಿ ಇಲ್ಲ. ಈಗಾಗಲೇ ಅದು ಸಾಬೀತಾಗಿದೆ. ಹೋರಾಟಗಳ ಮೂಲಕ ರಾಜ್ಯವನ್ನು ಸೈಕಲ್‌ನಲ್ಲಿ ಸುತ್ತಿದ ಏಕೈಕ ವ್ಯಕಿ ಯಡಿಯೂರಪ್ಪ. ಪಕ್ಷದ ಕೆಲವರ ಚಿತಾವಣೆಯಿಂದ ಕಳೆದ ಬಾರಿ ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದರಿಂದ ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಬಿಜೆಪಿ ಇರುವಂತಾಗಿದೆ. ಪ್ರಸ್ತುತ ರಾಜಾ ಹುಲಿ ಯಡಿಯೂರಪ್ಪನವರ ಮರಿ ಹುಲಿ ವಿಜೇಯೆಂದ್ರ ರಾಜ್ಯಾಧ್ಯಕ್ಷರಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಆದರೆ ಯತ್ನಾಳ್ ಟೀಂ ವೈಯಕ್ತಿಕವಾಗಿ ನಿಂದನೆ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಬಿಜೆಪಿ ಪಕ್ಷದ ಸಂಘಟನೆ ದೃಷ್ಟಿಯಿಂದ ವಿಜಯೇಂದ್ರರೇ ರಾಜ್ಯಾಧ್ಯಕ್ಷರಾಗಬೇಕು. ಆದ್ದರಿಂದ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರರಿಗೆ ಬಲ ತುಂಬಬೇಕು. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಶ್ರಮವಹಿಸಬೇಕು ಎಂದರು. ಹುಟ್ಟು ಹಬ್ಬದ ಸಲುವಾಗಿ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸೇರಿ ಪೂಜೆ ಸಲ್ಲಿಸಲಾಯಿತು. ನಂತರ ಯಡಿಯೂರಪ್ಪನವರ ಬೃಹತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಲಾಯಿತು.ಈ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತರು ದೇವಾಲಯ ಆವರಣ ಸೇರಿ ಸುತ್ತಾಮುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮ ಮಾಡಿದರು. ಕಾರ್ಯಕ್ರಮದಲ್ಲಿ ಯಡಿಯೂರಪ್ಪರ ಬಗ್ಗೆ ಅರಳಿಕೆರೆ ಗ್ರಾಮದ ದುಂಡೇಗೌಡರು ರಚಿಸಿದ್ದ ಹಾಡು ಹಾಡಿದರು. ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಾಲೇಗೌಡ ಮುಖಂಡರಾದ ಎಂ.ಡಿ.ಮೂರ್ತಿ. ರಾಮಣ್ಣ, ವಿ.ಬಿ.ಸುರೇಶ್, ಕೆಂಪೇಗೌಡ, ಅರಳಿಕೆರೆಶಿವಯ್ಯ, ಶಿವಲಿಂಗಯ್ಯ, ಪ್ರಕಾಶ್, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಅನಿತಾ ನಂಜುಂಡಸ್ವಾಮಿ, ಚೂಡಾಮಣಿ, ಮಹೇಶ್, ಪ್ರಕಾಶ್, ರಂಗಸ್ವಾಮಿ, ಜಗದೀಶ್, ಮಂಜೇಗೌಡ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.