ಸಾರಾಂಶ
ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಿಗೆ ಅಭಿನಂದನ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೂಗೌಡ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಕೆಲವರು ರಾಮಮಂದಿರ ಕಟ್ಟಿದರೆ ಹೊಟ್ಟೆ ತುಂಬುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೇ ಅಕ್ಕಿ ಕಳ್ಳತನ ಮಾಡಿದರೆ ಜನರ ಹೊಟ್ಟೆ ತುಂಬುತ್ತದೆಯೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೂಗೌಡ ಅವರು ರಾಮ ಮಂದಿರದ ಬಗ್ಗೆ ಹೇಳಿಕೆ ನೀಡುವವರಿಗೆ ಈ ಬಗ್ಗೆ ಪ್ರಶ್ನೆ ಮಾಡುತ್ತೇನೆ ಎಂದರು.ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಬಿಜೆಪಿ ವತಿಯಿಂದ ನಡೆದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರು ಒಂದು ದಿನ ನೀರಿಗಾಗಿ ಹೋರಾಟ ಮಾಡಿದ ಉದಾಹರಣೆಗಳಿಲ್ಲ. ಆದರೆ, ಈಗಿನ ಸರ್ಕಾರದಲ್ಲಿ ನೀರಿಗಾಗಿ ರೈತರು 23 ದಿನಗಳ ಕಾಲ ಆಹೋ ರಾತ್ರಿ ಧರಣಿ ನಡೆಸಿದರು. ನೀರು ಯಾರಹೊಲಕ್ಕೆ ಎಷ್ಟು ತಲುಪಿದವು, ದೇವರೇ ಬಲ್ಲ. ನಿಮಗೆ ಸಕಾಲಕ್ಕೆ ನೀರು ಕೊಟ್ಟು ರೈತರ ಸಂಕಷ್ಟಕ್ಕೆ ನೆರವು ನೀಡಿದ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ ಸುಳ್ಳು ಗ್ಯಾರಂಟಿ ನಂಬಿ ಮೋಸ ಹೋಗಿದ್ದೀರಿ. ನಾವು ರಾಮ ಮಂದಿರ ಕಟ್ಟಿಲ್ಲ, ಶಾಲೆ, ದವಾಖಾನೆ, ಕಾಲೇಜು ಕೈಗಾರಿಕೆ ಕಟ್ಟಿದ್ದೇವೆ ಎಂದು ಹೇಳುವವರು ರಾಮ ಮಂದಿರ ಕಟ್ಟಿದ ಮೇಲೆ ಯಾಕೆ ನೆನಪು ಬಂತು ಎಂದು ಈ ಮೂಲಕ ಪ್ರಶ್ನೆಗೆ ಮಾಡುತ್ತೇನೆ ಎಂದರು.ಕಲಬುರಗಿಯಲ್ಲಿ ಖರ್ಗೆಯವರು ಬುದ್ಧ ಮಂದಿರ ಕಟ್ಟಿದರೆ ನಾವೆಲ್ಲ ಖುಷಿಪಟ್ಟಿದ್ದೇವೆ. ಆದರೆ, ಈ ಕಾಂಗ್ರೆಸ್ ನವರಿಗೆ ನಾವು ರಾಮ ಮಂದಿರ ಕಟ್ಟಿದರೆ ಯಾಕೆ ಹೊಟ್ಟೆ ಉರಿ. ರಾಮಾಯಣ ಬರೆದವರು ಯಾರು ದಲಿತ ಮಹರ್ಷಿ ವಾಲ್ಮೀಕಿ ಅವರು, ಹಾಗಾದರೇ ರಾಮಾಯಣದ ಗ್ರಂಥದ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಎಂದರು.
ರಾಜ್ಯದ ಯುವ ಪಡೆಯ ದಂಡ ನಾಯಕನಾಗಿ ವಿಜಯೇಂದ್ರರು ಅಧಿಕಾರ ವಹಿಸಿಕೊಂಡ ಮೇಲೆ ಬಿಜೆಪಿಗೆ ನವ ಚೈತನ್ಯ, ಹೊಸ ಹುರುಪು, ಉತ್ಸಾಹ ಬಂದಿದೆ. ನಮಗೆ ಸಮರ್ಥ ದಂಡ ನಾಯಕ ಸಿಕ್ಕಿರುವದರಿಂದ ಬರುವ ಲೋಕಸಭಾ ಚುನಾವಣೆ ಕದನದಲ್ಲಿ 28 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎನ್ನುವ ಸಂಕಲ್ಪ ಮಾಡಿ ಚುನಾವಣೆ ರಂಗಭೂಮಿ ಪ್ರವೇಶಿಸೋಣ ಎಂದರು.