ಪರಿಶ್ರಮ ಪಟ್ಟು ಓದಿದಲ್ಲಿ ಗುರಿ ಮುಟ್ಟಲು ಸಾಧ್ಯ

| Published : Jan 06 2025, 01:04 AM IST

ಸಾರಾಂಶ

ಯಾವುದೇ ಕಾರ್ಯಗಳನ್ನು ಇಷ್ಟಪಟ್ಟು ಮಾಡಬೇಕು. ಕಷ್ಟ ಪಟ್ಟು ಅಲ್ಲ. ಸಮಸ್ಯೆಗಳು ಇಲ್ಲದ ಜೀವನವೇ ಇಲ್ಲ

ಶಿರಹಟ್ಟಿ: ನಿರಂತರ ಅಧ್ಯಯನದಿಂದ ಶ್ರೇಷ್ಠತ್ವ ಸಾಧಿಸಬಹುದು. ಬಡತನಕ್ಕೂ ಮತ್ತು ಶಿಕ್ಷಣಕ್ಕೂ ಸಂಬಂಧವಿಲ್ಲ. ಆತ್ಮವಿಶ್ವಾಸ ಇದ್ದಿದ್ದೇ ಆದರೆ ಏನನ್ನಾದರೂ ಸಾಧಿಸಬಹುದು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.

ಭಾನುವಾರ ಪಟ್ಟಣದ ಶಿಕ್ಷಕರ ಸಮುದಾಯ ಭವನದಲ್ಲಿ ಗಂಧದ ಗುಡಿ ಬಳಗ ಹಾಗೂ ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೩೪೩ನೇ ಶ್ರೇಣಿಯೊಂದಿಗೆ ತೇರ್ಗಡೆಯಾದ ಪಟ್ಟಣದ ಅಂಬೇಡ್ಕರ್ ನಗರದ ಯುವಕ ಯಲ್ಲಪ್ಪ ಗೋಶೆಲ್ಯನವರ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬುದ್ಧಿವಂತಿಕೆಯನ್ನು ಇಂದಿನ ಸಮಾಜ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಉನ್ನತ ಹುದ್ದೆ ಪಡೆಯಬೇಕೆನ್ನುವವರು ಸಹನೆ-ತಾಳ್ಮೆಯಿಂದ ಓದುವ ಜತೆಯಲ್ಲಿ ಕೊನೆಯವರೆಗೂ ವಿದ್ಯಾರ್ಥಿಯಾಗಿರಬೇಕು. ಹುಟ್ಟಿನಿಂದಲೇ ಯಾರೂ ಜೀನಿಯಸ್ ಅಲ್ಲ. ಕಾರ್ಯ ಸಾಧನೆಯಿಂದ ನಾವು ಜೀನಿಯಸ್ ಆಗಬಹುದು. ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಅಂದುಕೊಂಡ ಗುರಿ ಮುಟ್ಟಬಹುದು ಎಂದರು.

ಪಪಂ ಸದಸ್ಯ ಸಂದೀಪ ಕಪ್ಪತ್ತನವರ ಮಾತನಾಡಿ, ಯಾವುದೇ ಕಾರ್ಯಗಳನ್ನು ಇಷ್ಟಪಟ್ಟು ಮಾಡಬೇಕು. ಕಷ್ಟ ಪಟ್ಟು ಅಲ್ಲ. ಸಮಸ್ಯೆಗಳು ಇಲ್ಲದ ಜೀವನವೇ ಇಲ್ಲ. ಅದನ್ನು ಎದುರಿಸಿ ನಿಲ್ಲುವ ಛಲ, ಕಾರ್ಯ ನಮ್ಮದಾಗಬೇಕು. ಮನುಷ್ಯನು ಜೀವನದಲ್ಲಿ ಸಾಧಿಸುವ ಛಲ ಹೊಂದಿರಬೇಕು. ಗುರಿ ಇಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಪಪಂ ಸದಸ್ಯ ಮಂಜುನಾಥ ಘಂಟಿ, ಗಂಧದ ಗುಡಿ ಬಳಗದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಹಸನ್ ತಹಶೀಲ್ದಾರ, ತಾಪಂ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಪಪಂ ಮಾಜಿ ಅಧ್ಯಕ್ಷ ಬುಡನಶ್ಯಾ ಮಕಾನದಾರ, ರವಿ ಗುಡಿಮನಿ, ಶಿಕ್ಷಣ ಸಂಯೋಜಕ ಹರೀಶ, ರಾಜಶೇಖರ ಅಕ್ಕಿ, ಅಕ್ಬರಸಾಬ್‌ ಯಾದಗಿರಿ, ಪ್ರವೀಣ ಹಡಪದ, ಮಾಬುಸಾಬ ಲಕ್ಷ್ಮೇಶ್ವರ, ಸಂಜೀವ ಪೋತರಾಜ, ರಿಯಾಜ್‌ ತಹಶೀಲ್ದಾರ, ಶ್ರೀನಿವಾಸ ಬಾರಬಾರ, ಆನಂದ ಕೊಡ್ಲಿ, ಶರೀಫ ಗುಡಿಮನಿ, ಶಿದ್ದಪ್ಪ ಶಿರಹಟ್ಟಿ, ಈರಣ್ಣ ಚಿಕ್ಕತೋಟದ, ಸತೀಶ ನರಗುಂದ, ಅನಿಲ ಗುಡಿಮನಿ ಇತರರಿದ್ದರು.