ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಕುರಿತು ಕೀಳು ಮಾತುಗಳನ್ನಾಡಿದರೆ ಸಮಾಜ ಸಹಿಸುವುದಿಲ್ಲ. ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಆರ್.ಕೆ.ಪಾಟೀಲರು ಮಾಜಿ ಸಚಿವ ಮುರಗೇಶ ನಿರಾಣಿಗೆ ಎಚ್ಚರಿಕೆ ನೀಡಿದರು.ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂಬ ಉದ್ದೇಶದಿಂದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಲಕ್ಷ್ಮೀ ಹೆಬ್ಬಾಳಕರ ಕುಟುಂಬ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಆದರೂ ಮೃಣಾಲ್ ಹೆಬ್ಬಾಳಕರ ಜಾತಿ ಕುರಿತು ಚುನಾವಣೆ ಸಮಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಾತು ಕೇಳಿ ಸಮಾಜದ ಜನರಲ್ಲಿ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದರು.ಮೃಣಾಲ್ ಹೆಬ್ಬಾಳಕರ ಜಾತಿಯ ಕುರಿತು ನಿರಾಣಿ ಹೇಳಿಕೆ ವಿಷಯವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸಮಾಜಕ್ಕೆ ಬೇಕಾದವರು ಬಂದು ಸಹಕಾರ ನೀಡಿರುವವರನ್ನು ಸ್ವಾಗತಿಸಲಾಗಿದೆ. ಮೃಣಾಲ್ ಹೆಬ್ಬಾಳಕರ ಪಂಚಮಸಾಲಿ ಎಂದು ಸ್ವಾಮೀಜಿ ಒಪ್ಪಿಕೊಂಡಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸಹಕಾರ ನೀಡಿದಲ್ಲಿ ತಾವು ಅವರನ್ನು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಾಜದ ನಾಯಕರು, ಸ್ವಾಗತಿಸುತ್ತೇವೆ ಎಂದು ಹೇಳಿದ ಕ್ಷಣಾರ್ಧದಲ್ಲೆ ನಾವು ಒಪ್ಪಿಕೊಳ್ಳುವುದಿಲ್ಲ. ಲಿಂಗಾಯತ ಸಮುದಾಯದಲ್ಲಿದ್ದ ಬಣಜಿಗ ಸಮುದಾಯಕ್ಕಷ್ಟೇ ಮೀಸಲಾತಿ ಪಡೆದುಕೊಂಡಿದ್ದಾರೆ. ಆದ್ದರಿಂದ ನಾವು ಅವರನ್ನು ಒಪ್ಪಿಕೊಳ್ಳುವುದಿಲ್ಲ. ಮುರಗೇಶ ನಿರಾಣಿ ಅವರ ಜಾತಿ ಯಾವುದು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಂಚಮಸಾಲಿ ಸಮಾಜದವರಾಗಿದ್ದರೇ ಮೀಸಲಾತಿಗೆ ವಿರೋಧಿಸುತ್ತಿರಲಿಲ್ಲ ಎಂದಷ್ಟೇ ಹೇಳಿದರು.ದಾವಣಗೆರೆ ಜಿಲ್ಲಾಧ್ಯಕ್ಷ ಅಶೋಕ ಮಾತನಾಡಿ, ಮೀಸಲಾತಿ ಹೋರಾಟದ ವೇಳೆ ಕೆಜಿ ಬಂಗಾರ ಕೊಡಿಸುವುದಾಗಿ ಹೇಳಿರುವ ನಿಮಗೆ ಆವಾಗ ಜಾತಿ ಗೊತ್ತಿರಲಿಲ್ಲವೇ? ಮೀಸಲಾತಿ ಕೊಡದಂತೆ ಸರ್ಕಾರದ ಮೇಲೆ ಒತ್ತಡಹಾಕಿದ್ದು ನೀವೆ. ಈ ಕುರಿತು ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವಂತೆ ಸವಾಲು ಹಾಕಿದರು.
ಗೋಷ್ಠಿಯಲ್ಲಿ ಗುಂಡು ಪಾಟೀಲ, ಮಹಾಂತೇಶ್ ಮತ್ತಿಕೊಪ್ಪ, ವಿಜಕುಮಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.--------------
ಬಾಕ್ಸ್..ಕೂಡಲಸಂಗಮ ಪಂಚಮಸಾಲಿ ಸಮಾಜದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಹಾಕಿರುವುದು ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ ನಿರಾಣಿ ಹಗುರವಾಗಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಶುಕ್ರವಾರ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಮುಖಂಡರು ಪ್ರತಿಭಟನೆ ನಡೆಸಿದರು. ಅಲ್ಲದೆ, ನಿರಾಣಿ ಫೋಟೋ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಇನ್ನೊಂದು ಬಾರಿ ಮಾತನಾಡದಂತೆ ನಿರಾಣಿಗೆ ಎಚ್ಚರಿಕೆ ನೀಡಿದರು. ಮುರಗೇಶ ನಿರಾಣಿ ನಮ್ಮ ಸಮಾಜದ ವ್ಯಕ್ತಿಯಾಗಿ ನಮಗೆ ನ್ಯಾಯ ಕೊಡಿಸಲು ಆಗಲಿಲ್ಲ. ಆದರೆ ನಮ್ಮ ಸಮಾಜದವರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.
--------------ಕೋಟ್.....
ಮುರಗೇಶ ನಿರಾಣಿ ಅಧಿಕಾರದಲ್ಲಿದ್ದಾಗ ಸಮಾಜದೊಂದಿಗೆ ಇಲ್ಲ. ಅಧಿಕಾರದ ದುರಾಸೆಗೆ ಸಮಾಜ ಬಳಸಿಕೊಂಡಿದ್ದರ ಪರಿಣಾಮ ಜನರು ಪಾಠ ಕಲಿಸಿದ್ದಾರೆ. ಹೆಬ್ಬಾಳಕರ ಕುಟುಂಬವನ್ನು ಪಂಚಮಸಾಲಿ ಸಮಾಜದವರು ಎಂದು ಜಗದ್ಗುರುಗಳೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಸ್ವಾಮೀಜಿಗಳು ಕಾಂಗ್ರೆಸ್ ಏಜೆಂಟರಂತೆ ಮಾತನಾಡುವುದನ್ನು ಬೀಡಬೇಕು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಶ್ರೀಗಳ ಕುರಿತು ಏನಾದರೂ ಮಾತನಾಡಿದ್ದಾದರೆ ತಕ್ಕಪಾಠ ಕಲಿಸಬೇಕಾಗುತ್ತದೆ.- ಆರ್.ಕೆ.ಪಾಟೀಲ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷರು.