ಸಾರಾಂಶ
ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿದರು. ಗುರು, ತಂದೆ ತಾಯಿ ಕಲಿಸಿದ ಸಂಸ್ಕಾರ ಪ್ರತಿಯೊಬ್ಬ ವ್ಯಕ್ತಿ ಬಾಳಿ ಬದುಕಿ ಮಣ್ಣು ಸೇರುವವರೆಗೂ ಇರುತ್ತದೆ. ಸಂಸ್ಕಾರ ಇಲ್ಲದ ಬದುಕು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯಲಾರದು. ಹಾಗಾಗಿ ಪ್ರತಿಯೊಬ್ಬರ ಬದುಕಿನಲ್ಲಿ ಸಂಸ್ಕಾರ ಅಗತ್ಯ. ಸಂಸ್ಕಾರವಂತರು ಈ ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವರು ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಪ್ರತಿ ಮನೆಯಲ್ಲೂ ಮಹನೀಯರನ್ನು ಕಾಣಬಹುದು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆರ್ಶೀವಚನ ನೀಡಿದರು.
ಗುರು, ತಂದೆ ತಾಯಿ ಕಲಿಸಿದ ಸಂಸ್ಕಾರ ಪ್ರತಿಯೊಬ್ಬ ವ್ಯಕ್ತಿ ಬಾಳಿ ಬದುಕಿ ಮಣ್ಣು ಸೇರುವವರೆಗೂ ಇರುತ್ತದೆ. ಸಂಸ್ಕಾರ ಇಲ್ಲದ ಬದುಕು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯಲಾರದು. ಹಾಗಾಗಿ ಪ್ರತಿಯೊಬ್ಬರ ಬದುಕಿನಲ್ಲಿ ಸಂಸ್ಕಾರ ಅಗತ್ಯ. ಸಂಸ್ಕಾರವಂತರು ಈ ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವರು ಎಂದರು. ಕೃಷ್ಣನಿಗೆ ತಾಯಿ ಯಶೋಧೆ,ರಾಮನಿಗೆ ತಾಯಿ ಕೌಸಲ್ಯ ಕಲಿಸಿದ ಸಂಸ್ಕಾರ ಇಬ್ಬರನ್ನು ಮಹಾ ದೈವಿಪುರುಷರನ್ನಾಗಿಸಿತು. ಅಂತೆಯೇ ನಾವು ನಮ್ಮ ಮಕ್ಕಳಿಗೆ ಕಲಿಸುವ ಸಂಸ್ಕಾರ ಅವರನ್ನು ಕುಟುಂಬದ ಆಸ್ತಿಯಲ್ಲ,ಸಮಾಜದ ಆಸ್ತಿಯನ್ನಾಗಿಸುತ್ತದೆ ಎಂಬುದನ್ನು ಪೋಷಕರು ಮರೆಯಬಾರದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಶಶಿಕುಮಾರ್ ಮಾತನಾಡಿ, ಮಹನೀಯರ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕು. ಆಗ ಮಾತ್ರ ನಮ್ಮ ಮುಂದಿನ ತಲೆಮಾರು ಅದನ್ನು ಅನುಸರಿಸುತ್ತದೆ. ಇಲ್ಲವಾದಲ್ಲಿ ಯುವ ಪೀಳಿಗೆಯನ್ನು ಸರಿ ದಾರಿಯನ್ನು ಕೊಂಡೊಯ್ಯುವುದು ಕಠಿಣವಾಗಲಿದೆ ಎಂದರು.
ಇದೇ ವೇಳೆ ಮಕ್ಕಳು ರಾಧೆ-ಕೃಷ್ಣರ ವೇಷ ಧರಿಸಿ ಕಂಗೊಳಿಸದರಲ್ಲದೆ, ಹಾಡಿ,ನಲಿದು ವೇದಿಕೆಯಲ್ಲಿ ವಿವಿಧ ನೃತ್ಯ ರೂಪಕ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದರ್ಶನ್, ಜಿಲ್ಲಾ ಕಸಾಪ ಗೌರ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಪೋಷಕರು ಹಾಜರಿದ್ದರು.