ಸಾರಾಂಶ
ಕನ್ನಡ ಪ್ರಭ ವಾರ್ತೆ, ಚಿಕ್ಕಮಗಳೂರು
ಸಾಮಾಜಿಕ ನ್ಯಾಯ, ಸಂವಿಧಾನದ ಆಶಯಗಳ ಪರ, ಧ್ವನಿ ಇಲ್ಲದ ಜನರ ಸೇವೆ ಮಾಡಬೇಕು ಎಂಬುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಉದ್ದೇಶವಾಗಿದ್ದು, ಈ ರೀತಿ ಪೂರಕ ಕೆಲಸ ಮಾಡುವವರಿಗೆ ಪಕ್ಷದಲ್ಲಿ ಗುರುತಿಸಿ ಜವಾಬ್ದಾರಿ ನೀಡಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಹೇಳಿದರು.ಮೂರನೇ ಬಾರಿಗೆ ಎಐಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ನಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಯುವಕರಿಗೆ ಹೆಚ್ಚು ಅಧಿಕಾರ ನೀಡಲು ರಾಹುಲ್‌ಗಾಂಧಿ ಮುಂದಾಗಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರನ್ನು ನೇರ ಸಂಪರ್ಕಿಸಬೇಕೆಂಬ ಉದ್ದೇಶದಿಂದ ಭಾರತ್ ಜೋಡೋ ಪಾದಯಾತ್ರೆ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಂದರು.ಹಿಂದೆ ನಗರ ಯುವ ಕಾಂಗ್ರೆಸ್‌ಗೆ ಆಯ್ಕೆಯಾದ ನನ್ನನ್ನು ಪಕ್ಷದ ಹಿರಿಯ ಮುಖಂಡರು ಸೇರಿ ಅವರೆಲ್ಲರ ಸಹಕಾರದಿಂದ ಕೆಪಿಸಿಸಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದೆ. ಪ್ರಸ್ತುತ ಯುವಕರು ಹೆಚ್ಚಾಗಿ ಸೇರುತ್ತಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ಬಂದಿದೆ ಎಂದರು.
ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದು ಮುಂದೆ ಚುನಾವಣೆ ನಡೆಯುತ್ತಿರುವ ರಾಜ್ಯದ ಉಸ್ತುವಾರಿ ನೀಡಿದ್ದಾರೆ. ಅನುಭವದ ಜೊತೆಗೆ ಪಕ್ಷಕ್ಕೆ ಪ್ರಾಮಾಣಿಕ ಕೆಲಸ ಮಾಡಬೇಕೆಂದು ಗುರಿ ಹೊಂದಿದ್ದೇನೆಂದು ತಿಳಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯಿತ್ರಿ ಶಾಂತೇಗೌಡ ಮಾತನಾಡಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಪಕ ವಾಗಿ ನಿಭಾಯಿಸಿದಾಗ ಪಕ್ಷ ನಮ್ಮನ್ನು ಗುರುತಿಸುತ್ತದೆ. ಕಳೆದ ಚುನಾವಣೆ ಸಂದರ್ಭದಲ್ಲಿ ನನಗೆ ಹಾಸನ ಹಾಗೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ನೀಡಿದ್ದು ಸಮರ್ಪಕವಾಗಿ ನಿಭಾಯಿಸಿದ್ದರಿಂದ ರಾಹುಲ್‌ಗಾಂಧಿಯವರ ಮತ ಪ್ರಚಾರ ಸಭೆ ಯಶಸ್ವಿಯಾಯಿತು ಎಂದು ಹೇಳಿದರು.
ಸಿಕ್ಕಿದ ಅವಕಾಶ ಸದುಪಯೋಗಪಡಿಸಿಕೊಂಡು ಪರಿಶ್ರಮದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು. ರಾಜಕೀಯ ಬೇಡ ಎಂದು ತೀರ್ಮಾನಿಸಿದ್ದ ನನಗೆ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಟಿಕೆಟ್ ನೀಡಿಗೆದ್ದು ಅಧ್ಯಕ್ಷನೂ ಆಗಿದ್ದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯಕುಮಾರ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ನಗರಾಧ್ಯಕ್ಷ ತನೂಜ್ ಕುಮಾರ್, ಮುಖಂಡರಾದ ಮಲ್ಲೇಶ್ ಸ್ವಾಮಿ, ಪ್ರಕಾಶ್ ರೈ, ಲಕ್ಷ್ಮಣ, ಸಿ.ಸಿ. ಮಧು, ಅನೀಲ್, ಬೆಟ್ಟಗೆರೆ ಪ್ರವೀಣ್, ಖಲಂದರ್, ಪರಮೇಶ್, ಶಾದಬ್ ಅಲಂ ಖಾನ್, ಶಿವಾನಂದ್, ನಾಗಭೂಷಣ್, ಪ್ರಕಾಶ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು. 9 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಅವರಿಗೆ ಪಕ್ಷದ ಮುಖಂಡರು ಅಭಿನಂದನೆ ಸಲ್ಲಿಸಿದರು. ಎ.ವಿ. ಗಾಯತ್ರಿ ಶಾಂತೇಗೌಡ, ಡಾ. ಡಿ.ಎಲ್. ವಿಜಯಕುಮಾರ್, ಮಂಜೇಗೌಡ, ಶಿವಾನಂದ ಸ್ವಾಮಿ ಇದ್ದರು.