ಸಿರಿಗೆರೆ ಪ್ರತಿಭೆ ಕಾವ್ಯರ ಐಎಫ್ಎಸ್ ಪಯಣ

| Published : May 19 2024, 01:53 AM IST

ಸಾರಾಂಶ

ಐಎಫ್‌ಎಸ್‌ ಪರೀಕ್ಷೆ ಫಲಿತಾಂಶ ಬಂದ ನಂತರ ಪತ್ರಿಕೆಯ ಜೊತೆಗೆ ಕಾವ್ಯ ಅವರು ಮಾತನಾಡಿ, ತಮ್ಮ ಐಎಫ್ಎಸ್ ಪಯಣದ ಕುರಿತು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮನೆಯಲ್ಲಿನ ತೀವ್ರ ಬಡತನದ ಮಧ್ಯೆಯೂ ಅಪೂರ್ವವಾದ ಸಾಧನೆ ಮಾಡಿ ರಾಜ್ಯದ ಇನ್ನಿತರ ಬಾಲಕಿಯರಿಗೆ ಮಾದರಿಯಾಗಿದ್ದಾರೆ ಸಿರಿಗೆರೆ ಬಿ.ಎಲ್.‌ಆರ್.‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈ.ಎಸ್.‌ಕಾವ್ಯ.

೨೦೨೩ನೆಯ ಸಾಲಿನ ಯುಪಿಎಸ್‌ಸಿ ಫಲಿತಾಂಶ ಮೊನ್ನೆ ತಾನೆ ಪ್ರಕಟವಾಗಿದ್ದು, ವೈ.ಎಸ್.‌ಕಾವ್ಯ ರಾಷ್ಟ್ರಮಟ್ಟದ ಈ ಪರೀಕ್ಷೆಯಲ್ಲಿ ೭ನೆಯ ಸ್ಥಾನ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಐ.ಎಫ್.ಎಸ್.‌ ಪರೀಕ್ಷೆ ಪಾಸು ಮಾಡಿರುವವರ ಸಂಖ್ಯೆ ಈ ಬಾರಿ ೧೪೭. ಅದರಲ್ಲಿ ಕಾವ್ಯ ಗಳಿಸಿರುವ ಸ್ಥಾನ ಏಳನೆಯದು. ರಾಜ್ಯದಿಂದ ಆಯ್ಕೆ ಆಗಿರುವವರ ಸಾಲಿನಲ್ಲಿ ಕಾವ್ಯ ಮೊದಲ ಸ್ಥಾನ ಗಳಿಸಿದ್ದಾರೆ.

ಹಳ್ಳಿಯ ಸಾಮಾನ್ಯ ಕುಟುಂಬವೊಂದರ ಬಾಲಕಿ ರಾಷ್ಟ್ರಮಟ್ಟದಲ್ಲಿ ಮಾಡಿದ ಈ ಸಾಧನೆ ಹಲವು ಬಾಲಕಿಯರಿಗೆ ಪ್ರೇರಣೆಯಾಗಿದೆ. ಮೂಲತಃ ಕಡೂರು ತಾಲ್ಲೂಕಿನ ಯರದಕೆರೆ ಗ್ರಾಮದ ರೈತ ಕುಟುಂಬದ ಸೋಮಶೇಖರಪ್ಪ ಮತ್ತು ರತ್ನಮ್ಮ ದಂಪತಿಗಳ ಮಗಳು ಕಾವ್ಯ. ಪ್ರೌಢಶಾಲಾ ವ್ಯಾಸಂಗವನ್ನು ಕಡೂರು ಪಟ್ಟಣದ ವೇದಾವತಿ ಬಾಲಿಕ ಪ್ರೌಢಶಾಲೆಯಲ್ಲಿ ಮುಗಿಸಿ ಆತ್ಮೀಯರೊಬ್ಬರ ಒತ್ತಾಸೆಗೆ ಮಣಿದು ಪಿಯುಸಿ ವ್ಯಾಸಂಗಕ್ಕೆ ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾದರು. ಸಿರಿಗೆರೆಯಲ್ಲಿ ಸಿಕ್ಕ ಪ್ರೊತ್ಸಾಹ, ಸ್ಪರ್ಧಾತ್ಮಕ ವಾತಾವರಣ ಕಾವ್ಯ ಅವರಲ್ಲಿ ಸಾಧನೆಯ ದಾರಿಯನ್ನು ಸ್ಥಿರಗೊಳಿಸಿದವು.

ಐಎಫ್‌ಎಸ್‌ ಪರೀಕ್ಷೆ ಫಲಿತಾಂಶ ಬಂದ ನಂತರ ಪತ್ರಿಕೆಯ ಜೊತೆಗೆ ಅವರು ಮಾತನಾಡಿ, ತಮ್ಮ ಐಎಫ್ಎಸ್ ಪಯಣದ ಕುರಿತು ಮಾತನಾಡಿದ್ದಾರೆ.* ನಿಮ್ಮ ಬಾಲ್ಯ, ಓದಿನ ಬಗ್ಗೆ ಹೇಳಿ?

ಪ್ರಾಥಮಿಕ ಶಾಲಾ ಶಿಕ್ಷಣವನ್ನು ನನ್ನ ಹುಟ್ಟೂರು ಯರದಕೆರೆಯಲ್ಲಿ ಪೂರೈಸಿದೆ. ಕಾನ್ವೆಂಟ್‌ ಗೀಳು ಬೆಳೆಯಲು ಆರಂಭವಾಗುತ್ತಿದ್ದ ದಿನಗಳವು. ಆದರೆ, ಸರ್ಕಾರಿ ಶಾಲೆಯಲ್ಲಿಯೇ ನಾನು ಓದಿದ್ದು. ನಂತರ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಕಡೂರು ಪಟ್ಟಣದಲ್ಲಿ ನಡೆಸುತ್ತಿರುವ ವೇದಾವತಿ ಪ್ರೌಢಶಾಲೆಗೆ ಸೇರಿಕೊಂಡೆ. ಅಲ್ಲಿಯ ಶಿಕ್ಷಕರ ಪ್ರೋತ್ಸಾಹದಿಂದ ನನ್ನ ಓದಿನ ಗುರಿಯನ್ನು ಹಾಕಿಕೊಂಡೆ. ಶಾಲೆಯಲ್ಲಿ ಉತ್ತಮ ಶಿಕ್ಷಕರ ಮಾರ್ಗದರ್ಶನ ನನಗೆ ದೊರಕಿತ್ತು. ಪ್ರೌಢಶಿಕ್ಷಣ ನನ್ನ ಬದುಕಿನ ದಾರಿಯ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿತು. ಸಹೋದರ ಮನೋಹರ್‌ ಈ ಸಂದರ್ಭದಲ್ಲಿ ಶಿಕ್ಷಕನ ಪಾತ್ರವನ್ನೂ ವಹಿಸಿದ್ದು ಮುಖ್ಯ ಸಂಗತಿ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ ನಂತರ ಪಿಯುಸಿ ವ್ಯಾಸಂಗಕ್ಕೆ ಸಿರಿಗೆರೆಗೆ ಬಂದೆ. ಅಲ್ಲಿನ ತರಳಬಾಳು ಬೃಹನ್ಮಠವು ನಡೆಸುತ್ತಿರುವ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದೆ. ಇಲ್ಲಿಂದ ನನ್ನ ಓದಿನ ದಿಕ್ಕು ಬದಲಾಯಿತು. ನನ್ನಲ್ಲಿ ಆತ್ಮಸ್ಥೈರ್ಯ ಹುಟ್ಟಿತು. ಸಿರಿಗೆರೆಯ ವಾತಾವರಣವು ಶಿಕ್ಷಣ ಕೇಂದ್ರೀಕೃತವಾದ್ದರಿಂದ ಅದರ ಕಡೆಗೆ ಹೆಚ್ಚು ಆಸಕ್ತಿ ಬೆಳೆಯಿತು.* ಬೆಂಗಳೂರಿನ ಇಂಜಿನಿಯರಿಂಗ್‌ ಶಿಕ್ಷಣಕ್ಕೆ ಅಣಿಯಾದದ್ಹೇಗೆ ?

ಪಿಯುಸಿ ನಂತರ ಸಿಇಟಿಯಲ್ಲಿ ಉತ್ತಮ ಸ್ಥಾನ ದೊರೆಯಿತು. ವ್ಯಾಸಂಗದ ನಂತರ ವೃತ್ತಿಯ ಗಮನವಿಟ್ಟುಕೊಂಡು, ಐಟಿ ಹಬ್‌ ಎನಿಸಿಕೊಂಡ ಬೆಂಗಳೂರಿನ ಡಾ. ಅಂಬೇಡ್ಕರ್‌ ಇನ್ ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್‌ ಕಾಲೇಜಲ್ಲಿ ಮುಗಿಸಿದೆ. ಓದು ದುಸ್ತರವೇ ಆಗಿದ್ದ ಕಾಲ. ತಂದೆ-ತಾಯಿಯರ ದುಡಿಮೆಯ ಶ್ರಮದಿಂದಲೇ ನನ್ನ ಓದು ಸಾಗಬೇಕಿತ್ತು. ನನ್ನ ದೊಡ್ಡಪ್ಪ ವೈ.ಎಚ್.‌ ಶಿವಮೂರ್ತಿ, ಸಹೋದರ ಮನೋಹರ ಮತ್ತು ಸಹೋದರಿ ಮಮತಾ ನನ್ನ ಬೆಂಬಲಕ್ಕೆ ನಿಂತು ನೈತಿಕ ಶಕ್ತಿ ತುಂಬಿದರು.

ಇಂಜಿನಿಯರಿಂಗ್‌ ಮುಗಿಸಿ ಮೈಂಡ್‌ಟ್ರೀಯಲ್ಲಿ ಕೆಲಸಕ್ಕೆ ಸೇರಿದೆ. ಆದರೆ ಯುಪಿಎಸ್‌ಸಿಗೆ ಓದಬೇಕೆಂಬ ತವಕ ಒಳಗೇ ಗರಿಗಟ್ಟಿತ್ತು. ಕೆಲವು ತಿಂಗಳುಗಳ ನಂತರ ಇದ್ದ ಕೆಲಸವನ್ನೂ ಬಿಟ್ಟು ಯುಪಿಎಸ್‌ಸಿ ಪರೀಕ್ಷೆಗೆ ಓದಲು ಸಿದ್ಧತೆ ಮಾಡಿಕೊಂಡೆ. ಐ.ಎ.ಎಸ್.‌ ಪರೀಕ್ಸೆ ಪಾಸು ಮಾಡಲೇಬೇಕೆಂಬ ಉತ್ಕಟೇಚ್ಛೆ ಒಳಗೊಳಗೇ ಗಟ್ಟಿಯಾಗಿತ್ತು.* ಐಎಎಸ್‌ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡ ಅನುಭವ ಹೇಳಿ..

ಜೊತೆಗೆ ಉಚಿತ ತರಬೇತಿ ಪಡೆಯಲು ನಿಗದಿಪಡಿಸಿದ್ದ ಪರೀಕ್ಷೆ ಪಾಸು ಮಾಡಿದೆ. ಇದರಿಂದಾಗಿ ೨೦೧೭-೧೮ ರಲ್ಲಿ ದೆಹಲಿಯ ವಾಜಿರಾಂ ಮತ್ತು ರವಿ ಇನ್‌ಸ್ಟಿಟ್ಯೂಟ್‌ಗಳಲ್ಲಿ ಉಚಿತ ತರಬೇತಿಗೆ ಸೇರಿಕೊಂಡೆ. ಒಂದು ಬಾರಿ ಐಎಎಸ್‌ ತೆಗೆದುಕೊಂಡು ಸಂದರ್ಶನ ಹಂತದವರೆಗೂ ಬಂದಿದ್ದೆ. ಆದರೆ ಅಂತಿಮ ಹಂತದಲ್ಲಿ ನನ್ನ ಆಯ್ಕೆ ಆಗಿರಲಿಲ್ಲ. ಛಲ ಬಿಡದೆ ನನ್ನೊಳಗೆ ಇದ್ದ ಸ್ಥಿರತೆ ಮತ್ತು ಬದ್ಧತೆಯನ್ನು ಕಾಯ್ದುಕೊಂಡು ಮತ್ತೆ ಸಿದ್ಧತೆ ನಡೆಸಿದೆ. ಅದರ ಪ್ರತಿಫಲವೇ ನನ್ನ ಈ ಬಾರಿಯ ಆಯ್ಕೆಗೆ ಕಾರಣವಾಗಿದೆ. ರಾಷ್ಟ್ರಮಟ್ಟದಲ್ಲಿ ೧೪೭ ಸಹಪಾಠಿಗಳು ಐಎಫ್‌ಎಸ್‌ಗೆ ಆಯ್ಕೆ ಆಗಿದ್ದಾರೆ. ಅದರಲ್ಲಿ ನನ್ನದು ಏಳನೆಯ ಸ್ಥಾನ. ಕರ್ನಾಟಕದಿಂದ ಮೊದಲನೆಯವಳಾಗಿ ಆಯ್ಕೆ ಆಗಿರುವೆ. ತುಂಬಾ ಸಂತೋಷವಾಗಿದೆ. ನನ್ನೊಂದಿಗೆ ಇದ್ದವರೆಲ್ಲರಿಗೂ ಕೃತಜ್ಞತೆ ಹೇಳುವೆ. ನನ್ನ ಪಯಣದಲ್ಲಿ ಬಂಧುಗಳು, ಸ್ನೇಹಿತರೂ ಬಹಳಷ್ಟು ನೆರವಾಗಿದ್ದಾರೆ. ಅವರಿಗೆ ನಾನು ಋಣಿ. * ಐಎಎಸ್‌ ಓದು ಅಷ್ಟೊಂದು ಕಷ್ಟವೆ?

೬ ಗಂಟೆ, ೮ ಗಂಟೆ ಓದಿದೆ ಅನ್ನೋದೆಲ್ಲಾ ಉಪಯೋಗವಿಲ್ಲದ ಮಾತು. ಎಲ್ಲರೂ ಕಷ್ಟಪಟ್ಟು ಶ್ರದ್ಧೆಯಿಂದಲೇ ಓದುತ್ತಾರೆ. ಓದಲೇಬೇಕಾದುದು ಅನಿವಾರ್ಯ. ಪರೀಕ್ಷೆಯಲ್ಲಿ ಉನ್ನತ ಗುರಿ ಮುಟ್ಟುವ ಅಪೇಕ್ಷೆ ಹೊಂದಿರುತ್ತಾರೆ. ಆದರೆ ಪರೀಕ್ಷೆಯ ಸಮಯದಲ್ಲಿನ ಭಯ ಎಂತಹವರನ್ನೂ ಕಾಡುತ್ತದೆ. ದೈಹಿಕ ದೃಢತೆ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೇವಲ ಒಂದೆರಡು ಅಂಕಗಳ ಕೊರತೆಯಿಂದ ನಿರಾಶೆ ಆದ ನಂತರ ನಾನೂ ಕೂಡ ಯೋಗ, ವಿಪಾಸನಾ, ಮಾನಸಿಕ ಮತ್ತು ದೈಹಿಕ ಕಸರತ್ತುಗಳಿಗೆ ಸಂಬಂಧಿಸಿದ ಚಟುವಟಿಕೆಗಳತ್ತ ಗಮನ ಹರಿಸಿದೆ.* ಸೇವೆಯಲ್ಲಿ ನಿಮ್ಮ ತೊಡಗಿಸಿಕೊಳ್ಳುವಿಕೆ?

ಈಗ ಹಲವು ಬಗೆಯ ತರಬೇತಿಗಳಿಗೆ ಅಣಿಯಾಗಬೇಕಾಗಿದೆ. ನಂತರ ಸರ್ಕಾರಿ ಅಧಿಕಾರಿಯಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದು ನನ್ನ ಹೊಣೆಗಾರಿಕೆ. ಸರ್ಕಾರವು ನೀಡುವ ತರಬೇತಿಯಿಂದ ಇನ್ನಷ್ಟು ಸದೃಢ ಚಿಂತನೆಗಳನ್ನು ಬೆಳೆಸಿಕೊಂಡು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವೆ.

ಚಿತ್ರಗಳು:

ನವದೆಹಲಿಯ ಯುಪಿಎಸ್‌ಸಿ ಮುಂಭಾಗದಲ್ಲಿ ತಂದೆ ತಾಯಿ ಮತ್ತು ಸಹೋದರಿಯೊಂದಿಗೆ ಕಾವ್ಯ.

ವೈ.ಎಸ್.‌ ಕಾವ್ಯ (ಯು.ಪಿ.ಎಸ್.ಸಿ. ಮುಂಭಾಗದಲ್ಲಿ)