ಅರಸೀಕೆರೆ: ತಾಲೂಕಿನ ಖ್ಯಾತ ಸಾಹಿತಿ ಎಚ್. ಡಿ. ದಿವಾಕರ್ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ “ಐಫಾ ಅಕ್ಷರನಾದ ಇಂಟರ್‌ನ್ಯಾಷನಲ್ ಹೈಕಾನಿಕ್ ಫಾರ್ಚುನ್ ಅವಾರ್ಡ್” ಪ್ರದಾನ ಮಾಡಲಾಗಿದೆ.ಬೆಂಗಳೂರಿನ ಅಕ್ಷರನಾದ ಸೋಶಿಯಲ್ ವೆಲ್ಫೇರ್‌ ಕ್ಲಬ್ ಕರ್ನಾಟಕ ಹಾಗೂ ಅಕ್ಷರನಾದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಮಹತ್ವದ ಸೇವೆಯನ್ನು ಪರಿಗಣಿಸಿ ದಿವಾಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಉತ್ತರಹಳ್ಳಿಯ ಧಾರಾವಾಹಿ ಸ್ಪೋರ್ಟ್ಸ್ ಅಂಡ್ ಕಲ್ಚರ್ ಅಸೋಸಿಯೇಷನ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಎಚ್. ಡಿ. ದಿವಾಕರ್ ಅವರು ಕಥೆ, ಕವನ, ಚುಟುಕು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಬರಹಗಳನ್ನು ರಚಿಸಿ ಗಮನಸೆಳೆದಿದ್ದಾರೆ. ಅವರ ಬರಹಗಳಲ್ಲಿ ಪ್ರಕೃತಿ, ವಾಸ್ತವ ಜೀವನ, ಸಾಮಾಜಿಕ ಸಮಸ್ಯೆಗಳು, ವಿಡಂಬನೆ ಮತ್ತು ಹಾಸ್ಯ ಅಂಶಗಳು ಸಮರ್ಪಕವಾಗಿ ಪ್ರತಿಫಲಿಸುತ್ತವೆ. ಸರಳ ಭಾಷೆ ಮತ್ತು ಗಂಭೀರ ಅರ್ಥವನ್ನು ಹೊಂದಿರುವ ಅವರ ಸಾಹಿತ್ಯ ಜನಮನ ಗೆದ್ದಿದೆ.ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ದಿವಾಕರ್‌, ಹಲವು ಸಂಘಸಂಸ್ಥೆಗಳ ಅಭಿನಂದನೆಗೂ ಭಾಜನರಾಗಿದ್ದು, ಸಾಹಿತ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಈ ಪ್ರಶಸ್ತಿ ಅವರ ಸಾಹಿತ್ಯ ಸಾಧನೆಗೆ ಮತ್ತೊಂದು ಮಹತ್ವದ ಮೆಟ್ಟಿಲಾಗಿದೆ ಎಂದು ಸಾಹಿತ್ಯ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.