ಸಾರಾಂಶ
ಧಾರವಾಡ: ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಳೆದ ಆಗಸ್ಟ್ 3ರಂದು ನಡೆದ ಇಸ್ರೋ ರೋಬೊಟಿಕ್ಸ್ ಚಾಲೆಂಜ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಧಾರವಾಡದ ಭಾರತೀಯ ಮಾಹಿತಿ- ತಂತ್ರಜ್ಞಾನ ಸಂಸ್ಥೆ (ಐಐಐಟಿ) ಎನ್‌ಜಿಓಆರ್‌ಡಿ ತಂಡವು ತೃತೀಯ ಸ್ಥಾನ ಗಳಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಐಐಐಟಿ ನಿರ್ದೇಶಕ ಡಾ. ಮಹಾದೇವ ಪ್ರಸನ್ನ, ದೇಶದ ಐಐಟಿ, ಐಐಐಟಿ, ಎನ್‌ಐಟಿ ಸೇರಿದಂತೆ ವಿವಿಧ ತಂತ್ರಜ್ಞಾನ ಸಂಸ್ಥೆಗಳ ಸುಮಾರು 1700 ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಈ ಪೈಕಿ ಧಾರವಾಡ ಐಐಐಟಿ ಸೌರಬ್ ಕರ್ಕಿ ನಾಯಕತ್ವದ ಅಮಿತ್ ಮ್ಯಾಥ್ಯು, ರಂಜಿತ ಬಾಬು, ಕೃಷ್ಣ ಸಾಯಿ ಗೊಲ್ಲಮುಡಿ, ಅರ್ನವ್ ಅಮಿತ್ ಅಂಗರ್ಕರ್, ಪುರೋಹಿತ್ ಘನಶ್ಯಾಮ್, ಲೋಹಿತ್ ಬಿ ವಿದ್ಯಾರ್ಥಿಗಳ ತಂಡವು ವಿವಿಧ ಹಂತಗಳಲ್ಲಿ ವಿಜಯ ಸಾಧಿಸಿ 3ನೇ ಸ್ಥಾನ ಗಳಿಸಿದ್ದಾಗಿ ಹೇಳಿದರು.ಇಸ್ರೋ ಯು.ಆರ್. ರಾವ್ ಹೆಸರಿನ ಉಪಗ್ರಹ ಕೇಂದ್ರವು ಇಸ್ರೋ ರೋಬೊಟಿಕ್ಸ್ ಚಾಲೆಂಜ್ ಮೂಲಕ ಭಾರತದ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಂದ ರೋಬೊಟಿಕ್ ರೋವರ್‌ಗಳ ಪ್ರಸ್ತಾಪಗಳು ಮತ್ತು ವಿನ್ಯಾಸಗಳನ್ನು ಸ್ಪರ್ಧೆಗೆ ಆಹ್ವಾನಿಸಿತ್ತು. ಚಂದ್ರಯಾನ-3 ಹಾಗೂ ಪ್ರಜ್ಞಾನ್ ರೋವರ್‌ನೊಂದಿಗೆ ಮೇಲ್ಮೈ ಪರಿಶೋಧನೆ ಯಶಸ್ವಿ ಬಳಿಕ ಬಾಹ್ಯಾಕಾಶ- ರೋಬೊಟಿಕ್ಸ್ ಅಭಿವೃದ್ಧಿ ವಿಸ್ತರಣೆ, ಭವಿಷ್ಯದ ಅಂತರಗ್ರಹ ಕಾರ್ಯಾಚರಣೆ ನವೀನ ಚಿಂತನೆ ಬಳಸಲು ಈ ಸ್ಪರ್ಧೆ ನಡೆಸಿದ್ದಾಗಿ ಹೇಳಿದರು.
ಸ್ಪರ್ಧೆಯಲ್ಲಿ ಜಿಪಿಎಸ್ ಇಲ್ಲದ, ಮ್ಯಾಗ್ನೆಟೋಮೀಟರ್ ಬಳಸದ ಪರಿಸರದಲ್ಲಿ ಸ್ವಯಂ ಕಾರ್ಯಾಚರಣೆ ಸಾಮರ್ಥ್ಯ ಹೊಂದಿರುವ ವೈಮಾನಿಕ ''''''''ಫ್ಲೈ ಮಿ ಟು ಮಾರ್ಸ್'''''''' ರೋಬೋಟಿಕ್ ರೋವರ್ ರಚಿಸಿದ ಧಾರವಾಡ ಐಐಐಟಿ ತಂಡ ತೃತೀಯ ಸ್ಥಾನ ಗಳಿಸಿದೆ ಎಂದರು.ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಕಂದೆ ಮಾತನಾಡಿ, ಗ್ರಹಗಳ ವೈಮಾನಿಕ ಗ್ರಹಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ ಹಾಗೂ ಸುರಕ್ಷತೆ ಆಧಾರಿತ ನಿಯಂತ್ರಣದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ನಮ್ಮ ವಿದ್ಯಾರ್ಥಿಗಳ ತಂಡವು ಫೈನಲ್ ಸುತ್ತಿನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾಗಿ ಹೇಳಿದರು.
ಕೇಂದ್ರಿಕೃತ ಸೂಚನೆ, ಶಿಸ್ತುಬದ್ಧ ಪ್ರಯೋಗ ಹಾಗೂ ಸಾಂಸ್ಥಿಕ ಬೆಂಬಲ ತಂಡದ ಫಲಿತಾಂಶ ಗಮನಿಸಿ, ಕಳೆದ ಆ. 23ರಂದು ನವದೆಹಲಿ ಭಾರತ್ ಮಂಟಪದಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನ ಧಾರವಾಡ ಐಐಐಟಿ ತಂಡಕ್ಕೆ ಪ್ರಶಸ್ತಿ ಘೋಷಿಸಿತು ಎಂದರು.ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಕೆ. ಗೋಪಿನಾಥ, ಪಿಆರ್‌ಓ ವಾಸುದೇವ ಪರ್ವತಿ ಇದ್ದರು.