ಇಸ್ರೋ ಆಯೋಜಿಸಿದ್ದ ರಾಷ್ಟ್ರಮಟ್ಟದ ಇಸ್ರೋ ರೋಬೋಟಿಕ್ಸ್​ ಚಾಲೆಂಜ್​-2026 ಸ್ಪರ್ಧೆಯಲ್ಲಿ ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ₹ 2 ಲಕ್ಷ ಬಹುಮಾನದೊಂದಿಗೆ 4ನೇ ಸ್ಥಾನ ಪಡೆದಿದೆ.

ಧಾರವಾಡ:

ಇಲ್ಲಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದು, ಮುಂದುವರಿದ ಭಾಗವಾಗಿ ಇಸ್ರೋ ಆಯೋಜಿಸಿದ್ದ ರಾಷ್ಟ್ರಮಟ್ಟದ ಇಸ್ರೋ ರೋಬೋಟಿಕ್ಸ್​ ಚಾಲೆಂಜ್​-2026 ಸ್ಪರ್ಧೆಯಲ್ಲಿ ₹ 2 ಲಕ್ಷ ಬಹುಮಾನದೊಂದಿಗೆ 4ನೇ ಸ್ಥಾನ ಪಡೆದಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಐಐಟಿ ನಿರ್ದೇಶಕ ಪ್ರೊ. ಎಸ್​.ಆರ್. ಮಹದೇವ ಪ್ರಸನ್, ಸ್ಪರ್ಧೆಯು ಪ್ರಾಥಮಿಕ, ಅರ್ಹತಾ, ಎಲಿಮಿನೇಷನ್​ ಮತ್ತು ಅಂತಿಮ ಹಂತ ಒಳಗೊಂಡಿತ್ತು. ಐಐಟಿಯ ಟೀಮ್​ ಐಕಾರಸ್ ತಂಡವು​ ಮೊದಲ ಮೂರು ಹಂತಗಳನ್ನು ಯಶಸ್ವಿಯಾಗಿ ರ್ಪೂಣಗೊಳಿಸಿ, ಅಂತಿಮ ಸುತ್ತಿಗೆ ಆಯ್ಕೆಯಾದ 20 ತಂಡಗಳಲ್ಲಿ ಸ್ಥಾನ ಪಡೆಯಿತು. ಬೆಂಗಳೂರಿನ ಯು.ಆರ್​. ರಾವ್​ ಉಪಗ್ರಹ ಕೇಂದ್ರದಲ್ಲಿ (ಯುಆರ್​ಎಸ್​ಸಿ) ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆಯಿತು ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಸ್ಪರ್ಧೆಗಾಗಿ ತಂಡವು ಜಿಪಿಎಸ್​ ಸೌಲಭ್ಯವಿಲ್ಲದ, ಮಂಗಳ ಗ್ರಹದ ಪರಿಸರವನ್ನು ಹೋಲುವ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲ ಪ್ರಾದೇಶಿಕ ನ್ಯಾವಿಗೇಶನ್​ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ದೃಶ್ಯ, ಜಡತ್ವ ಆಧಾರಿತ ಸಂಚಲನ (ವಿಷುವಲ್​-ಇನಷಿರ್ಯಲ್​ ನ್ಯಾವಿಗೇಶನ್​), ಆಪ್ಟಿಕಲ್ ಆಧಾರಿತ ಸಂಚಲನ ಹಾಗೂ ಕಂಪ್ಯೂಟರ್​ ವಿಷನ್​ ತಂತ್ರಜ್ಞಾನ ಬಳಸಿಕೊಂಡು ರೊಬೋಟ್​ ಚಲನೆ ಮತ್ತು ಪರಿಸರದ ಅರಿವನ್ನು ಸುಧಾರಿಸುವಲ್ಲಿ ತಂಡ ಯಶಸ್ವಿಯಾಯಿತು ಎಂದು ವಿವರಿಸಿದರು.

ಸ್ಪರ್ಧೆಯು ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ ಹಾಗೂ ತಾಂತ್ರಿಕ ಮಾರ್ಗದರ್ಶನ ಪಡೆಯಲು ಈ ಸ್ಪರ್ಧೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗಿಸಿತು. ಟೀಮ್​ ಐಕಾರಸ್​ ಸದಸ್ಯರಾದ ಜೈಶಲ್​ ಪಟೇಲ್​, ಸಕ್ಷಮ್​ ಗುಪ್ತಾ, ಅಶ್ವಿನ್​ ಜೋಸೆಫ್​, ಪ್ರಿಯಾಂಶು ಮಿತ್ತಲ್​, ರಿಷಿನ್​ ವರ್ಮಾ, ಅಂಕಿತ್​ ದಾಸ್​, ಮೊಹಮ್ಮದ ರೆಹಾನ್​ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಧಾರವಾಡ ಐಐಐಟಿ ಪ್ರಾಧ್ಯಾಪಕ ಮಲ್ಲಿಕಾರ್ಜುನ ಕಂಡೆ ಅವರು ಯೋಜನೆಯ ಅಭಿವೃದ್ಧಿ ಹಾಗೂ ಸ್ಪರ್ಧೆಯ ಸಿದ್ಧತೆ ಸಂದರ್ಭದಲ್ಲಿ ವಿದ್ಯಾಥಿರ್ಗಳಿಗೆ ಮಾರ್ಗದರ್ಶನ ನೀಡಿದರು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪ್ರರ್ದಶಿಸಿದ ಮಾದರಿಯನ್ನು ಭವಿಷ್ಯದಲ್ಲಿ ಇಸ್ರೋ ಸಂಶೋಧನೆಯಲ್ಲಿ ಅಳವಡಿಸಿಕೊಳ್ಳಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರೊ. ಮಹದೇವ ಪ್ರಸನ್‌ ಉತ್ತರಿಸಿದರು.

ಈ ವೇಳೆ ಐಐಐಟಿ ವಿದ್ಯಾರ್ಥಿ ಡೀನ್‌ ಡಾ.ಗೋಪಿನಾಥ ಕೆ. ಸತೀಶ್​ ಅಣ್ಣಿಗೇರಿ ಇದ್ದರು.