ಸಾರಾಂಶ
-ವ್ಯಸನ ಮುಕ್ತ ದಿನಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತ । ಇಳಕಲ್ ಮಹಾಂತಶ್ರೀ ಭಾವಚಿತ್ರಕ್ಕೆ ಪುಷ್ಪ ನಮನ
------ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಯುವಕರು ದುಶ್ಚಟಗಳಿಂದ ಹಾಳಾಗುತ್ತಿರುವುದ ಕಂಡು ಮರುಗುತ್ತಿದ್ದ ಇಳಕಲ್ಲಿನ ಡಾ.ಮಹಾಂತ ಶ್ರೀಗಳು ಜೋಳಿಗೆ ಹಾಕಿಕೊಂಡು ದುಶ್ಚಟಗಳ ಬೇಡಿದ ಪರಿ ಅನನ್ಯವಾದುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಯುವಜನತೆ ಮಾದಕ ವ್ಯಸನಗಳ ಕಡೆ ಆಕರ್ಷಣೆಯಾಗುತ್ತಿರುವುದು ವಿಷಾದನೀಯ ಸಂಗತಿ. ವ್ಯಸನಗಳು ಮನುಷ್ಯನ ಜೀವನ ಹಾಳು ಮಾಡುವುದರ ಜೊತೆಗೆ, ಕುಟುಂಬ ಹಾಗೂ ಸಮಾಜದ ವ್ಯವಸ್ಥೆ ಹಾಳುಗೆಡವುತ್ತವೆ. ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ಮಹಾಂತ ಜೋಳಿಗೆ ಎಂಬ ಕಲ್ಪನೆ ರೂಪಿಸಿ, ದೇಶ ವಿದೇಶಗಳಲ್ಲಿ ಸಂಚರಿಸಿ, ಜನರ ದುಶ್ಚಟಗಳನ್ನು ತಮ್ಮ ಜೋಳಿಗೆ ತುಂಬಿಸಿಕೊಂಡು ವ್ಯಸನಮುಕ್ತರನ್ನಾಗಿಸಿ ಜನರ ಜೀವನ ಹಸನು ಮಾಡಿದರು ಎಂದರು.ಹಿಂದಿನ ದಿನಮಾನಗಳಲ್ಲಿ ದುಶ್ಚಟ ಎಂದರೆ ಕುಡಿತ, ಬೀಡಿ, ಸಿಗರೇಟ್, ಗುಟುಕಾ ಸೇವನೆಗೆ ಸೀಮಿತವಾಗಿತ್ತು. ಪ್ರಸ್ತುತ ದುಶ್ಚಟಗಳ ವ್ಯಾಪ್ತಿ ಎಲ್ಲೆ ಮೀರಿ ಹೋಗುತ್ತಿದೆ. ವಯಸ್ಸಿನ ಭೇದ ಭಾವಗಳಿಲ್ಲದೆ ಪ್ರತಿಯೊಬ್ಬರು ಸಂಯಮ ಹಾಗೂ ಅರಿವು ಬೆಳಸಿಕೊಳ್ಳುವ ಮೂಲಕ ದುಷ್ಚಟಗಳಿಂದ ದೂರವಿರುವಂತೆ ಕರೆ ನೀಡಿದರು.
ಮನೆಯ ಹಿರಿಯರಲ್ಲಿ ದುಶ್ಚಟಗಳಿದ್ದರೆ, ಮಕ್ಕಳು ದುಶ್ಚಟಕ್ಕೆ ಒಳಗಾಗುತ್ತಾರೆ. ಪಾಠ ಹೇಳುವ ಗುರುಗಳೇ ದುಶ್ಚಟಗಳ ದಾಸರಾದರೆ, ಮಕ್ಕಳಿಗೆ ದುಶ್ಚಟಗಳಿಂದ ದೂರ ಇರಿ ಎಂದು ಹೇಳುವ ನೈತಿಕತೆ ಕಳೆದುಕೊಳ್ಳಬೇಕಾಗುತ್ತದೆ. ಮನಪರಿವರ್ತನೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದು ಬಿ.ಟಿ.ಕುಮಾರಸ್ವಾಮಿ ಹೇಳಿದರು.ಯುವಜನತೆ ಡ್ರಗ್ಸ್ ಸೇವನೆಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಈ ಚಟಗಳಿಗೆ ಒಮ್ಮೆ ಅಂಟಿಕೊಂಡರೆ ಹೊರ ಬರುವುದು ಕಷ್ಟ. ಧೂಮಪಾನ ಮಾಡುವವರ ಸುತ್ತಮುತ್ತ ಇರುವವರು ಸಹ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಮನೆ ಹಾಗೂ ದೇಶವನ್ನು ವ್ಯಸನ ಮುಕ್ತವಾಗಿಸಲು ಪ್ರತಿಯೊಬ್ಬರು ಪಣತೊಡುವಂತೆ ಮನವಿ ಮಾಡಿದರು.
ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್ ಮಾತನಾಡಿ, ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 1ನ್ನು ರಾಜ್ಯ ಸರ್ಕಾರ ವ್ಯಸನ ಮುಕ್ತ ದಿನವನ್ನಾಗಿ ಘೋಷಿಸಿದೆ. ಡಾ. ಮಹಾಂತ ಶಿವಯೋಗಿ ಸ್ವಾಮಿಗಳ ಪ್ರೇರಣೆಯಿಂದ ರಾಜ್ಯದ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ನಾಡಿನಾದ್ಯಂತ ಸಂಚರಿಸಿ ಮಹಾಂತ ಜೋಳಿಗೆ ಹಿಡಿದು ಜನರಿಂದ ದುಶ್ಚಟಗಳ ಭಿಕ್ಷೆ ಪಡೆದು ಸ್ವಾಮೀಜಿ ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದರು.ಅಬಕಾರಿ ನಿರೀಕ್ಷಕಿ ವನಿತಾ ಮಾತನಾಡಿ, ಯುವ ಜನತೆ ವ್ಯಸನಗಳಿಂದ ದೂರವಾಗಿ, ಕುಟುಂಬ ಹಾಗೂ ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕು. ಮಾದಕ ವ್ಯಸನಗಳಾದ ಗಾಂಜಾ, ಹೆರಾಯಿನ್‌ಗಳಿಂದ ದೂರ ಇರಬೇಕು. ಮಾದಕ ವಸ್ತುಗಳ ಮಾರಾಟದ ಬಗ್ಗೆ ತಿಳಿದು ಬಂದರೆ, ತಕ್ಷಣವೇ ಅಬಕಾರಿ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಅಬಕಾರಿ ಇಲಾಖೆ ಮುಖ್ಯ ಪೇದೆ ರಮೇಶ್ ನಾಯ್ಕ್, ವಿಶ್ವದಲ್ಲಿ 120 ಕೋಟಿಗೂ ಅಧಿಕ ಜನ ಧೂಮಪಾನದಿಂದ ಭಾದಿತರಾಗಿದ್ದಾರೆ. ಶ್ವಾಸಕೋಶ, ಗಂಟಲು ಕ್ಯಾನ್ಸರ್ ಸೇರಿದಂತೆ, ಧೂಮಪಾನ ಮಾಡುವ ಗರ್ಭಿಣಿಯರಲ್ಲಿ ಹುಟ್ಟುವ ಮಗು ಸಹ ದುಷ್ಪರಿಣಾಮಕ್ಕೆ ತುತ್ತಾಗುತ್ತವೆ. ಪ್ರತಿಯೊಬ್ಬರು ಧೂಮಪಾನದಿಂದ ದೂರ ಇರಬೇಕು ಎಂದು ತಿಳಿಸಿದರು.ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಡಾ.ಮಹಾಂತ ಶಿವಯೋಗಿಗಳ ಕುರಿತು ಉಪನ್ಯಾಸ ನೀಡಿದರು. ಹರಿಯಬ್ಬೆ ಹೆಂಜಾರಪ್ಪ, ರಂಗಕರ್ಮಿ ಕೆಪಿಎಂ ಗಣೇಶಯ್ಯ ಇದ್ದರು.
-----------ಪೋಟೋ: ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆಯಲ್ಲಿ ಇಳಕಲ್ಲಿನ ಮಹಾಂತ ಶ್ರೀಗಳ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪುಷ್ಪ ನಮನ ಸಲ್ಲಿಸಿದರು.
-------ಫೋಟೋ.....
1 ಸಿಟಿಡಿ 1