ಬಂಟ್ವಾಳ: ತಾಲೂಕಿನ ವಿವಿಧೆಡೆಗಳಲ್ಲಿ ಶನಿವಾರ ಅಪರಾಹ್ನ ಬಳಿಕ ಗಾಳಿ ಮಳೆಯ ಆರ್ಭಟ ಜೋರಾಗಿದ್ದು, ಸಿಡಿಲಿನ ಅಬ್ಬರಕ್ಕೆ ಎರಡು ಪ್ರಮುಖ‌ ದೇವಸ್ಥಾನಗಳು ಮತ್ತು ಎರಡು ಮನೆಗಳಿಗೆ ಹಾನಿ ಉಂಟಾಗಿದೆ.

ಇಳಿಯೂರು ದೇವಸ್ಥಾನಕ್ಕೆ ಹಾನಿ:

ಮಣಿನಾಲ್ಕೂರು ಗ್ರಾಮದ ಇಳಿಯೂರು ದೇವಸ್ಥಾನಕ್ಜೆ ಶನಿವಾರ ಸಂಜೆ ಸಿಡಿಲು ಬಡಿದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಸಿಡಿಲು ಬಡಿದ ಪರಿಣಾಮ ಸುಮಾರು 1 ಕೋಟಿ ರು.ನಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಸಂಜೆ ಸುಮಾರು 4.30ರ ವೇಳೆಗೆ ಸುರಿದ ಗಾಳಿ, ಮಳೆ ಜೊತೆಗೆ ಸಿಡಿಲಿನ ಅಬ್ಬರವೂ ಜೋರಾಗಿತ್ತು. ಸಿಡಿಲಿನ ತೀವ್ರತೆಗೆ ಇಳಿಯೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಗರ್ಭ ಗುಡಿಯ ಮೇಲಿನ ಪ್ರಾಕಾರದ ಶಿಲಾ ಕಲ್ಲು ಛಿದ್ರ, ಛಿದ್ರಗೊಂಡು ನೆಲಕ್ಕಪ್ಪಳಿಸಿದೆ. ಈ ಸಂದರ್ಭ ದೇವಳದ ಅರ್ಚಕರು ಹೊರ ಭಾಗದಲ್ಲಿದ್ದುದರಿಂದ ಅವರಿಗೆ ಯಾವುದೇ ರೀತಿಯ ಅಪಾಯ ಉಂಟಾಗಿಲ್ಲ.

ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೆ ದೇವಸ್ಥಾನ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿದ್ದು, ಸಿಡಿಲಿಗೆ ಗರ್ಭಗುಡಿಗೂ ಹಾನಿಯಾಗಿದೆ. ಸಿಡಿಲು ಬಡಿದ ಕಾರಣ ಮತ್ತೆ ದೇವರ ಗುಡಿಯ ನವೀಕರಣ ಕಾರ್ಯ ನಡೆಯಬೇಕಿದೆ ಎಂದು ಹೇಳಲಾಗುತ್ತಿದೆ.


ದೇವಳದ ಆಡಳಿತ ಟ್ರಸ್ಟಿಗಳು ಸೇರಿದಂತೆ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಬಗ್ಗೆ ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದೆ. ಕಾರಿಂಜ ದೇವಳಕ್ಕೂ ಸಿಡಿಲಾಘಾತ:

ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಿಡಿಲು ಬಡಿದ ಘಟನೆ ಶನಿವಾರ ಸಂಭವಿಸಿದೆ.

ಕಾರಿಂಜೇಶ್ವರ ದೇವಸ್ಥಾನ ಬೃಹತ್ ಬಂಡೆಯ ಮೇಲೆ ಇದ್ದು, ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಸಿಡಿಲು ಬಡಿದಿರಬೇಕೆಂದು ಅಂದಾಜಿಸಲಾಗಿದೆ. ಈ ಹೊತ್ತಿನಲ್ಲಿ ಯಾರೂ ದೇವಸ್ಥಾನದಲ್ಲಿ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೇವಸ್ಥಾನದ ಗರ್ಭಗುಡಿಯ ಮೇಲಿನ ಗೋಪುರಕ್ಕೆ ಸಿಡಿಲು ಬಡಿದಿದ್ದು, ನಷ್ಟ ಅಂದಾಜಿಸಲಾಗಿಲ್ಲ. ಈ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ‌ ನೀಡಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರೇಂದ್ರ ಬಿ. ಅಮೀನ್ ತಿಳಿಸಿದ್ದಾರೆ.

ತಾಲೂಕಿನ ಕೆಲ ಭಾಗಗಳಲ್ಲಿ ಎರಡು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದ್ದು, ಶನಿವಾರ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಬಳಿಕ ಮಳೆ ಸುರಿದಿದೆ.

ಕಾವಳಪಡೂರು ಗ್ರಾಮದ ಮಧ್ವ ಬರ್ಕಟ್ಟ ಎಂಬಲ್ಲಿ ಕವಿತ ಸೇಸಪ್ಪ ಪೂಜಾರಿ ಎಂಬುವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಕಡೇಶಿವಾಲಯ ಗ್ರಾಮದ ಅಣ್ಣು ಪೂಜಾರಿ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ಪೆರಾಜೆ ಗ್ರಾಮದ ಕೊಂಕಣಪದವು ಲಲಿತ ಅವರ ಹೆಂಚಿನ ಮನೆ ಮೇಲೆ ಹಲಸಿನ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.