ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಜಾಗ ಅಕ್ರಮ ಖಾತೆ ಪ್ರಕರಣ: ದಾಖಲೆ ಪರಿಶೀಲನೆ

| Published : Aug 20 2024, 12:51 AM IST

ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಜಾಗ ಅಕ್ರಮ ಖಾತೆ ಪ್ರಕರಣ: ದಾಖಲೆ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಲ್ಲ ಮೂಲಗಳ ಪ್ರಕಾರ ತಾಲೂಕಿನಾದ್ಯಂತ ಇಂತಹ ದಂಧೆ ನಡೆದಿದೆ. ಅದರಲ್ಲಿಯೂ ಕಸಬಾ ಹಾಗೂ ಹಲಗೂರು ಭಾಗದಲ್ಲಿ ಹತ್ತರಿಂದ ನೂರಾರೂ ಎಕರೆ ಜಾಗವನ್ನು ಒಬ್ಬೊಬ್ಬ ವ್ಯಕ್ತಿ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಸಾಕಷ್ಟು ದೂರುಗಳು ಸಾರ್ವಜನಿರಿಂದ ಕೇಳಿಬರುತ್ತಿದ್ದವು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ಅದೇಶದ ಮೇರೆಗೆ ವಿಶೇಷ ತನಿಖಾ ತಂಡ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರಿಗೆ ಎದೆ ಬಡಿತ ಜೋರಾಗಿದೆ.

ತಾಲೂಕಿನಲ್ಲಿ ಸರ್ಕಾರಕ್ಕೆ ಸೇರಿದ ಸಾವಿರಾರು ಎಕರೆ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆಯಾಗಿವೆ. ಪ್ರಮುಖವಾಗಿ ಗೋಮಾಳ, ಹುಲುಬನ್ನಿ, ಗುಂಡುತೋಪು ಸೇರಿ ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಖಾತೆ ಸೃಷ್ಟಿಸಿ ಖಾಸಗಿಯವರಿಗೆ ನೀಡಲಾಗಿದೆ.

ಬಲ್ಲ ಮೂಲಗಳ ಪ್ರಕಾರ ತಾಲೂಕಿನಾದ್ಯಂತ ಇಂತಹ ದಂಧೆ ನಡೆದಿದೆ. ಅದರಲ್ಲಿಯೂ ಕಸಬಾ ಹಾಗೂ ಹಲಗೂರು ಭಾಗದಲ್ಲಿ ಹತ್ತರಿಂದ ನೂರಾರೂ ಎಕರೆ ಜಾಗವನ್ನು ಒಬ್ಬೊಬ್ಬ ವ್ಯಕ್ತಿ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಸಾಕಷ್ಟು ದೂರುಗಳು ಸಾರ್ವಜನಿರಿಂದ ಕೇಳಿಬರುತ್ತಿದ್ದವು.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯಸರ್ಕಾರ ತನಿಖಾ ತಂಡವನ್ನು ರಚಿಸುವಂತೆ ಕಳೆದ ಜು.26ರಂದು ಕಂದಾಯ ಇಲಾಖೆ(ಭೂ ಮಂಜೂರಾತಿ-2) ಪೀಠಾಧಿಕಾರಿ ಎಂ.ಎನ್.ಮುತ್ತುರಾಜ್ ಅದೇಶ ನೀಡಿದ್ದರು.

ಸರ್ಕಾರದ ಅದೇಶದಂತೆ ಕಂದಾಯ ಆಯುಕ್ತಾಲಯದ ವಿಶೇಷ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷರಾಗಿ, ಮೈಸೂರು ವಿಭಾಗದ ಹೆಚ್ಚುವರಿ ಆಯುಕ್ತೆ ಕವಿತಾ ರಾಜರಾಂ, ಕಂದಾಯ ಆಯುಕ್ತಾಲಯದ ಫ್ಲೈಯಿಂಗ್ ಸ್ಕ್ವಾಡ್‌ನ ಸಹಾಯಕ ಆಯುಕ್ತ ಎಚ್.ಡಿ.ರಾಜೇಶ್, ಪ್ರಾದೇಶಿಕ ಆಯುಕ್ತರ ಕಚೇರಿ ತಹಸೀಲ್ದಾರ್‌ಗಳಾದ ಎಸ್.ಎಲ್.ನಯನಾ, ಎಂ.ಆರ್.ಶಕುಂತಲಾ, ವೈ.ಎಸ್.ಸುಬ್ರಮಣ್ಯ, ಕಂದಾಯ ಆಯುಕ್ತಾಲಯದ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಭೂಮಿ ತಂತ್ರಾಂಶ ಕೋಶದ ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ ಸದಸ್ಯರಾಗಿ ಹಾಗೂ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕವಾಗಿದ್ದರು. ತನಿಖೆ ಚುರುಕು:

ಸಾವಿರಾರು ಎಕರೆ ಭೂಮಿ ಅಕ್ರಮವಾಗಿ ಪರಭಾರೆಯಾಗಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ವಿಧಾನಸಭಾ ಚುನಾವಣೆ ಮುನ್ನಾ ಸಾರ್ವಜನಿಕವಾಗಿಯೇ ಆರೋಪಿಸುತ್ತಿದ್ದರು. ಶಾಸಕರಾಗಿ ಆಯ್ಕೆಯಾದ ನಂತರ ಸರ್ಕಾರದ ಗಮನ ಸೆಳೆದು ತಾಲೂಕಿನಲ್ಲಿ ಅಕ್ರಮವಾಗಿ ಭೂಮಿ ಪರಭಾರೆಯಾಗಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು.

ಜೊತೆಗೆ 2023ರ ನ.21ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಜಾಗ ಅಕ್ರಮವಾಗಿ ಖಾತೆ ಮಾಡಿರುವ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಮನವಿ ಪುರಸ್ಕರಿಸಿದ ರಾಜ್ಯ ಸರ್ಕಾರ ತನಿಖಾ ತಂಡವನ್ನು ನೇಮಿಸಿದ್ದು, ಅದರಂತೆ ಮಳವಳ್ಳಿ ತಾಲೂಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಪ್ರಕರಣದ ಬಗ್ಗೆ ದಾಖಲೆ ಸಂಗ್ರಹಿಸಬೇಕು. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ತನಿಖಾ ತಂಡಕ್ಕೆ ಹಲವು ಸೂಚನೆ ನೀಡಿದೆ.

ಈ ಹಗರಣದಲ್ಲಿ ಅಧಿಕಾರಿ ಮತ್ತು ನೌಕರರು ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957, ಕರ್ನಾಟಕ ನಾಗರಿಕ ಸೇವಾ ನಿಯಮ 1958ರನ್ವಯ ದೋಷಾರೋಪಣಾ ಪಟ್ಟಿಯ ಕರಡನ್ನು ಸಿದ್ಧಪಡಿಸಬೇಕು. ಜತೆಗೆ 8 ದಿನದೊಳಗೆ ತನಿಖೆ ಪೂರ್ಣಗೊಳಿಸಿ ಸ್ಪಷ್ಟ ಶಿಫಾರಸ್ಸಿನೊಂದಿಗೆ ಕಂದಾಯ ಇಲಾಖೆ ಆಯುಕ್ತರಿಗೆ ಸಮಗ್ರ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದೆ.

ಮೇಲ್ನೋಟಕ್ಕೆ ಹಗರಣ ನಡೆದಿದೆ ಎಂದು ಗೊತ್ತಾದ ನಂತರ ಇಬ್ಬರು ನೌಕರರನ್ನು ಅಮಾನತುಗೊಳಿಸಲಾಗಿದೆ. ತನಿಖಾ ತಂಡ ತಾಲೂಕಿಗೆ ಆಗಮಿಸಿ ತನಿಖೆ ಆರಂಭಿಸಿರುವುದು ತಪ್ಪಿತಸ್ಥರಿಗೆ ನಡುಕ ಹುಟ್ಟಿಸಿದೆ. ಜಮೀನು ಖರೀದಿಸಿದವರಿಗೂ ಆತಂಕ ಎದುರಾಗಿದೆ. ಮಾಹಿತಿ ಇಲ್ಲದೆ ಜಮೀನು ಖರೀದಿಸುವವರಿಗೆ ಇದರಿಂದಾಗಿ ತಲೆಬಿಸಿ ತರಿಸಿದೆ. ತನಿಖಾ ತಂಡದ ವಿಚಾರಣೆ ವೇಳೆ ಇನ್ನಷ್ಟು ಅಕ್ರಮ ಮಾಹಿತಿ ಹೊರ ಬರುವ ಸಾಧ್ಯತೆ ಹೆಚ್ಚಾಗಿದೆ.