ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಬೇಕು: ಎಸ್ಪಿ ಡಾ. ವಿಕ್ರಂ ಅಮಟೆ

| Published : Feb 03 2024, 01:47 AM IST

ಸಾರಾಂಶ

ಶಾಲಾ ಕಾಲೇಜುಗಳ ಆವರಣ ಮತ್ತು ಸುತ್ತಮುತ್ತ ಯಾವುದೇ ರೀತಿ ನಕಾರಾತ್ಮಕ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

- ಪ್ರೌಢಶಾಲಾ ಮುಖ್ಯೋಪಾಧ್ಯಾಯರು- ಪೊಲೀಸ್ ಅಧಿಕಾರಿಗಳ ಸ್ನೇಹ ಸುರಕ್ಷಾ ಸಮನ್ವಯ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಾಲಾ ಕಾಲೇಜುಗಳ ಆವರಣ ಮತ್ತು ಸುತ್ತಮುತ್ತ ಯಾವುದೇ ರೀತಿ ನಕಾರಾತ್ಮಕ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಪೊಲೀಸ್ ಇಲಾಖೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ್ ಸಹಭಾಗಿತ್ವದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ತಾಲೂಕಿನ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾ ಯರು ಸೇರಿದಂತೆ ಪೊಲೀಸ್ ಅಧಿಕಾರಿಗಳ ಸ್ನೇಹ ಸುರಕ್ಷಾ ಎಂಬ ಸಮನ್ವಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿ ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಸಮನ್ವಯ ಅಧಿಕಾರಿಗಳ ನೇಮಕ, ಕಾರ್ಯವೈಖರಿ ಹಾಗೂ ಶಾಲಾ ಕಾಲೇಜು ಮಕ್ಕಳಲ್ಲಿ ಪ್ರಸ್ತುತ ಸಮಾಜದಲ್ಲಿ ಅತ್ಯಗತ್ಯವಾಗಿ ಇಂದಿನ ಅಪರಾಧ ಕೃತ್ಯಗಳ ಕುರಿತು ಅರಿವು, ತಿಳುವಳಿಕೆ, ಜ್ಞಾನ ಮತ್ತು ಸಂಚಾರ ನೀತಿ ನಿಯಮಗಳ ಪಾಲನೆಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಸಂಬಂಧ ವಿವರವಾಗಿ ಮಾಹಿತಿ ನೀಡಿದರು.

ಸೈಬರ್ ಅಪರಾಧಗಳು, ಪೋಕ್ಸೋ ಕಾಯ್ದೆ, ಸಂವಿಧಾನ, ಬಾಲಕಾರ್ಮಿಕರು, ಬಾಲ್ಯವಿವಾಹ, ಸಂಚಾರ ನೀತಿ ನಿಯಮ ಗಳು, ಅಪರಾಧ ಕೃತ್ಯಗಳು, ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶ, ಗುಣ ನಡತೆ, ಅಪ್ರಾಪ್ತರು ಹಾಗೂ ವಯಸ್ಕರ ನಡುವಿನ ವ್ಯತ್ಯಾಸ, ಲಿಂಗ ಸಂವೇದನೆ, ಸಾಫ್ಟ್ ಸ್ಕಿಲ್ ಇತ್ಯಾದಿ ವಿಷಯಗಳ ಕುರಿತು ತಿಳಿಸಿದ ಎಸ್ಪಿಯವರು, ಪ್ರತಿ ಗುರುವಾರ ಶಾಲಾ ಕಾಲೇಜುಗಳಲ್ಲಿ ಪೊಲೀಸರಿಂದ ತೆರೆದ ಮನೆ ಕಾರ್ಯಕ್ರಮ ಮುಂದುವರೆಸುವುದು ಎಂದು ಹೇಳಿದರು.ಮಕ್ಕಳ ವಿಶೇಷ ಪೊಲೀಸ್ ಘಟಕದ ಕರ್ತವ್ಯ, ಜವಾಬ್ದಾರಿ ಹಾಗೂ ಪ್ರತಿ ಠಾಣಾ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಿ ಪೊಲೀಸ್ ಸಮನ್ವಯ ಅಧಿಕಾರಿಗಳು ಶಾಲಾ ಕಾಲೇಜುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಹಾಗೂ ಕುಂದು ಕೊರತೆಗಳ ಕುರಿತಾಗಿ ತಕ್ಷಣ ಮಾಹಿತಿ ನೀಡುವಂತೆ ಜೊತೆಗೆ ಎಲ್ಲಾ ಪೊಲೀಸ್ ಅಧಿಕಾರಿಗಳು ಕನಿಷ್ಠ ಮೂರು ತಿಂಗಳಿಗೆ ಒಮ್ಮೆ ಠಾಣಾ ಹಂತದಲ್ಲಿ ಪೊಲೀಸ್ ಸಮನ್ವಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆಗೆ ಸೂಕ್ತ ರೀತಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್‌, ಶಿಕ್ಷಣಾಧಿಕಾರಿ ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್‌ ಹಾಗೂ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು. 2 ಕೆಸಿಕೆಎಂ 4ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಪೊಲೀಸ್ ಅಧಿಕಾರಿಗಳ ಸ್ನೇಹ ಸುರಕ್ಷಾ ಸಮನ್ವಯ ಕಾರ್ಯಕ್ರಮ ನಡೆಯಿತು. ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು.