ಬಗರ್‌ಹುಕುಂ ಭೂಮಿ ಅಕ್ರಮ ಮಂಜೂರು: ತನಿಖೆ

| Published : Jan 07 2025, 12:30 AM IST

ಸಾರಾಂಶ

ಕೆಜಿಎಫ್ ತಾಲೂಕಿನಲ್ಲಿ ಬಗರ್‌ಹುಕುಂ ಜಮೀನು ಮಂಜೂರು ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿ ೫೨೩ ಎಕರೆ ಭೂಮಿಯನ್ನು ೨೨೯ ಅನರ್ಹ ಫಲಾನುಭವಿಗಳಿಗೆ ಮಂಜೂರು ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ೧೫.೬೯ ಕೋಟಿ ರುಪಾಯಿಗಳ ನಷ್ಟವುಂಟು ಮಾಡಿರುವುದು ಲೋಕಾಯುಕ್ತ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.

ಕನ್ನಡ ಪ್ರಭ ವಾರ್ತೆ ಕೆಜಿಎಫ್‌ ರಾಜ್ಯದ ಇತಿಹಾಸದಲ್ಲೇ ಕೆಜಿಎಫ್ ತಾಲೂಕಿನ ತಹಸೀಲ್ದಾರ್ ಒಬ್ಬರು ಕೋಟ್ಯತರ ರುಪಾಯಿ ಮೌಲ್ಯ ೫೨೩ ಎಕರೆ ಬಗರ್ ಹುಕ್ಕಂ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿ ಖಾತೆಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಕೋಲಾರ ಲೋಕಾಯುಕ್ತ ಪೊಲೀಸ್‌ರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳಾದ ತಹಸೀಲ್ದಾರ್ ಕೆ.ಎನ್.ಸುಜಾತ, ಶಿರಸ್ತೆದಾರ್ ಕೆ.ಸಿ.ಸುರೇಶ್, ದ್ವೀತಿಯ ದರ್ಜೆ ಸಹಾಯಕ ಆರ್.ಪವನ್‌ಕುಮಾರ್ ವಿರುದ್ದ ಲೋಕಾಯುಕ್ತ ಪೊಲೀಸ್‌ರು ಹೆಚ್ಚಿನ ತನಿಖೆ ಕೈಗೊಳ್ಳಲು ಜನವರಿ ೧ ರಂದು ಕೋಲಾರ ಲೋಕಾಯುಕ್ತ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ,

ಏನಿದು ಪ್ರಕರಣ:ಕೆಜಿಎಫ್ ತಾಲೂಕಿನ ಅಂಡ್ರಸನ್‌ಪೇಟೆಯ ಗಂಗದೊಡ್ಡಿ ಗ್ರಾಮದ ನಿವಾಸಿಯಾದ ವೆಂಕಟೇಶ್‌ಗೌಡ ಎಂಬುವವರು ಬಗರ್‌ಹುಕಂ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ದಿನಪತ್ರಿಕೆಗಳ ವರದಿಯನ್ನಾಧಿರಿಸಿ ಕೋಲಾರ ಲೋಕಾಯುಕ್ತ ಪೊಲೀಸ್‌ರಿಗೆ ದೂರು ನೀಡಿದ್ದರು.

ಲೋಕಾಯುಕ್ತ ಪೊಲೀಸ್‌ ತನಿಖೆ

ಕೆಜಿಎಫ್ ತಾಲೂಕಿನಲ್ಲಿ ಬಗರ್‌ಹುಕುಂ ಜಮೀನು ಮಂಜೂರು ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿ ೫೨೩ ಎಕರೆ ಭೂಮಿಯನ್ನು ೨೨೯ ಅನರ್ಹ ಫಲಾನುಭವಿಗಳಿಗೆ ಮಂಜೂರು ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ೧೫.೬೯ ಕೋಟಿ ರುಪಾಯಿಗಳ ನಷ್ಟವುಂಟು ಮಾಡಿರುವುದು ಲೋಕಾಯುಕ್ತ ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಈ ಬಗ್ಗೆ ತಹಸೀಲ್ದಾರ್ ಕೆ.ಎನ್.ಸುಜಾತ, ಶಿರಸ್ತೆದಾರ ಕೆ.ಸಿ.ಸುರೇಶ್, ದ್ವೀತಿಯ ದರ್ಜೆ ಸಹಾಯಕ ಆರ್ ಪವನ್‌ಕುಮಾರ್ ವಿರುದ್ದ ಹೆಚ್ಚಿನ ತನಿಖೆ ನಡೆಸಲು ಕೋಲಾರ ಜಿಲ್ಲೆಯ ಲೋಕಾಯುಕ್ತ ವೃತ್ತ ನೀರಿಕ್ಷಕಿ ಹಾಗೂ ತನಿಖಾಧಿಕಾರಿ ರೇಣುಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಅಧಿಕಾರಿಗಳ ಅಮಾನತಿ ಆಗ್ರಹ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಟಿಐ ಕರ‍್ಯಕರ್ತ ಹಾಗೂ ದೂರುದಾರ ವೆಂಕಟೇಶ್ ಗೌಡ, ಇಷ್ಟು ದೊಡ್ಡ ಮಟ್ಟದ ಅಕ್ರಮ ಭೂ ಮಂಜೂರಾತಿ ರಾಜ್ಯದಲ್ಲಿ ಎಲ್ಲಿ ನಡೆದಿರುವುದಕ್ಕೆ ಸಾದ್ಯವಿಲ್ಲ, ಅಕ್ರಮ ಮಂಜೂರಾತಿಯನ್ನು ರದ್ದುಪಡಿಸಿ ಸರ್ಕಾರ ಭೂಮಿಯನ್ನು ವಶಕ್ಕೆ ಪಡೆಯಬೇಕು. ಅಕ್ರಮವೆಸಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಪಡಿಸಬೇಕು, ಕೆಜಿಎಫ್ ತಾಲೂಕಿನಲ್ಲಿ ನಡೆದಿರುವ ಭೂ ಮಂಜೂರಾತಿ ಪ್ರಕರಣಗಳನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.